ಬೆಂಗಳೂರು: ದಿನ ಬಳಕೆಗಳ ವಸ್ತುಗಳ ಬೆಲೆ ಏರಿಕೆಯಿಂದಲೇ ರೋಸಿ ಹೋಗಿರುವ ಜನಸಾಮಾನ್ಯ ವರ್ಗದವರಿಗೆ ಇದೀಗ ಸರ್ಕಾರ ಇನ್ನೊಂದು ಶಾಕಿಂಗ್ ಸುದ್ದಿ ನೀಡಲಿದೆ. ಹೌದು ಮುಂದಿನ ದಿನಗಳಲ್ಲಿ ಮೆಟ್ರೋ ಟಿಕೆಟ್ ದರದಲ್ಲಿ ಏರಿಕೆ ಮಾಡಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ.
ಈಚೆಗೆ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣ ಹೆಚ್ಚಾಗಿದ್ದರಿಂದ ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್‌ಫಾರಂ ಸ್ಕ್ರೀನ್ ಅಳವಡಿಸಲು ಚಿಂತಿಸಲಾಗಿದೆ. ಗ್ಲಾಸ್ ಅಳವಡಿಕೆಯಿಂದ ಒಂದು ನಿಲ್ದಾಣಕ್ಕೆ 6-7 ಕೋಟಿ ವೆಚ್ಚ ಆಗಲಿದೆ. ಹೀಗಾಗಿ ಟಿಕೆಟ್ ದರ ಏರಿಕೆ ಮಾಡಲು ಚಿಂತಿಸಲಾಗುತ್ತಿದೆ.
ಈ ಹಿಂದಿನಿಂದಲೂ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಪಿಎಸ್‌ಡಿ ಅಳವಡಿಕೆ ಮಾಡಲು ಚಿಂತನೆ ನಡೆದಿತ್ತು. ಪ್ರತಿ ನಿಲ್ದಾಣಕ್ಕೂ ಇದನ್ನು ಅಳವಡಿಕೆ ಮಾಡಬೇಕೆಂದರೆ ಬರೋಬ್ಬರಿ 6-7 ಕೋಟಿ ಬೇಕಾಗುತ್ತದೆ. ಈ ಹಣವನ್ನು ಬರಿಸುವ ಸಲುವಾಗಿ ಟಿಕೆಟ್ ದರದಲ್ಲಿ ಹೆಚ್ಚು ಮಾಡಲು ಚಿಂತಿಸಲಾಗಿದೆ.
ಈ ಬಗ್ಗೆ ಮೆಟ್ರೋದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ ಚವಾನ್ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಹಳೆ ನಿಲ್ದಾಣಗಳಿಗೆ ಪಿಎಸ್‌ಡಿ ಅಳವಡಿಕೆ ಮಾಡಲು ತಾಂತ್ರಿಕವಾಗಿ ಸಮಸ್ಯೆಗಳಿವೆ. ಯಾಕೆಂದರೆ ಹಳೆಯ ಸಿಗ್ನಲ್ ಇದೆ. ಸಾಫ್ಟ್‌ವೇರ್ ಬದಲಾವಣೆಗೆ ಕೂಡ ವೆಚ್ಚವಾಗುತ್ತದೆ. ಎಲ್ಲ ನಿಲ್ದಾಣಗಳಲ್ಲಿ ಇದನ್ನು ಅಳವಡಿಸಲು 70 ಕೋಟಿ ಬೇಕಿರುವುದರಿಂದ, ಟಿಕೆಟ್ ದರದಲ್ಲಿ ಹೆಚ್ಚಳ ಮಾಡಲು ಚಿಂತಿಸಲಾಯಿತು ಎಂದರು.