ಸೈಕ್ಲೋನ್ ಎಫೆಕ್ಟ್ ನಿಂದ ಮುಂಗಾರು ಕೈಕೊಡುವ ಸಾಧ್ಯತೆ

ಸೋಮವಾರ, 23 ಮೇ 2022 (20:14 IST)
ಅಂತರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ 19 ವರ್ಷಗಳ ಬಳಿಕ ಸೈಕ್ಲೋನ್‌ ಪರಿಣಾಮದಿಂದ ಮುಂಗಾರು ಹಂಗಾಮಿಗೂ ಮುನ್ನವೇ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿರುವುದು ರೈತರಲ್ಲಿ ಸಂತಸ ಮೂಡಿಸಿದರೆ, ಮತ್ತೂಂದೆಡೆ ಸೈಕ್ಲೋನ್‌ ಪ್ರಭಾವದಿಂದ ಮುಂಗಾರು ಕೈಕೊಡುವ ಸಾಧ್ಯತೆಗಳನ್ನೂ ಅಲ್ಲಗೆಳೆಯುವಂತಿಲ್ಲ.
 
ಹೌದು…! ಇಂಥಹದ್ದೊಂದು ಮುನ್ನೆಚ್ಚರಿಕೆಯ ಆತಂಕವನ್ನು ತುಂಗಭದ್ರಾ ಜಲಾಶಯದ ಇಂಜಿನೀಯರ್‌ಗಳೇ ವ್ಯಕ್ತಪಡಿಸಿದ್ದಾರೆ. ಬರೋಬ್ಬರಿ 19 ವರ್ಷಗಳ ಹಿಂದೆ ಸುಮಾರು 2003-04 ಅಥವಾ 2004-05ನೇ ಸಾಲಿನಲ್ಲೂ ಮುಂಗಾರು ಹಂಗಾಮುಗೂ ಮುನ್ನವೇ ಸೈಕ್ಲೋನ್‌ ಪ್ರಭಾವದಿಂದ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿತ್ತು. ಸೈಕ್ಲೋನ್‌ನ್ನು ಮಾನ್ಸೂನ್‌ ಎನ್ನಲೂ ಬರಲ್ಲ. ಸೈಕ್ಲೋನ್‌ ಪ್ರಭಾವದಿಂದ ಬೀಸುವ ಬಿರುಗಾಳಿ ಪರಿಣಾಮ ಮಾನ್ಸೂನ್‌ ಮೋಡಗಳು ಸಹ ಮುಂದಕ್ಕೆ ಹೋಗುವ ಸಾಧ್ಯತೆಗಳು ದಟ್ಟವಾಗಿದ್ದು, ಮುಂಗಾರು ಕೈಕೊಟ್ಟರೂ ಅಚ್ಚರಿಪಡುವಂತಿಲ್ಲ. 19 ವರ್ಷಗಳ ಹಿಂದೆಯೂ ಹೀಗೆ ಆಗಿತ್ತು. ಸೈಕ್ಲೋನ್‌ ಪರಿಣಾಮ ಅವ ಗೆ ಜಲಾಶಯಕ್ಕೆ ಒಂದಷ್ಟು ನೀರು ಹರಿದು ಬರಬಹುದಾದರೂ, ಕೃಷಿಗೆ ನೀಡುವಷ್ಟು, ನದಿಗೆ ಹರಿಸುವಷ್ಟು ಸಿಗುವುದು ಅನುಮಾನ. 19 ವರ್ಷಗಳ ಹಿಂದೆಯೂ ಹೀಗೆ ಆಗಿದ್ದರಿಂದ ಆ ವರ್ಷ 2ನೇ ಬೆಳೆಗೆ ನೀರು ಕೊಡಲು ಆಗಿಲ್ಲ ಎಂದು ಜಲಾಶಯದ ತಾಂತ್ರಿಕ ತಜ್ಞರೊಬ್ಬರು ಅಂದಿನ ದಿನಗಳನ್ನು ಮೆಲುಕು ಹಾಕಿದರು.
 
ನಾಲ್ಕು ದಿನದಲ್ಲಿ 15 ಟಿಎಂಸಿ ನೀರು ಸಂಗ್ರಹ
 
ಸೈಕ್ಲೋನ್‌ ಪರಿಣಾಮ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಕಳೆದ ನಾಲ್ಕು ದಿನಗಳಲ್ಲಿ ಸುಮಾರು 15 ಟಿಎಂಸಿ ಅಡಿಗೂ ಹೆಚ್ಚು ನೀರು ಹರಿದು ಬಂದಿದೆ. ಮೇ 19 ರಂದು 3100, ಮೇ 20ಕ್ಕೆ 16040 ಕ್ಯೂಸೆಕ್‌ ಇದ್ದ ಒಳಹರಿವಿನ ಪ್ರಮಾಣ, ಮೇ 21ಕ್ಕೆ 61189 ಕ್ಯೂಸೆಕ್‌, ಮೇ 22ಕ್ಕೆ 89664 ಕ್ಯೂಸೆಕ್‌ ಹೆಚ್ಚಳವಾಗಿದ್ದು, ಕಳೆದ ನಾಲ್ಕು ದಿನಗಳಲ್ಲಿ 15ಕ್ಕೂ ಹೆಚ್ಚು ಟಿಎಂಸಿ ಅಡಿ ನೀರು ಹರಿದುಬಂದಿದ್ದು, ಜಲಾಶಯದಲ್ಲಿ 27.48 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಇದೀಗ ಎರಡು ದಿನಗಳಿಂದ ಸೈಕ್ಲೋನ್‌ ಪ್ರಭಾವ ಕಡಿಮೆಯಾಗಿದ್ದು, ಇನ್ನೊಂದಿಷ್ಟು ನೀರು ಹರಿದು ಬರಬಹುದು. ಆದರೆ, ಇಷ್ಟು ಪ್ರಮಾಣದ ನೀರನ್ನು ಕೃಷಿಗೆ ಹರಿಸಲಾಗಲ್ಲ. ಮುಂಗಾರು ಬಂದರೆ ಸಮಸ್ಯೆಯಿಲ್ಲ. ಸೈಕ್ಲೋನ್‌ ಪ್ರಮಾಣ ಮುಂಗಾರು ಕೈಕೊಟ್ಟರೆ ತೊಂದರೆಯಾಗುವ ಸಾಧ್ಯತೆಯಿದೆ ಎಂಬುದು ಜಲಾಶಯದ ತಜ್ಞರ ಅಭಿಪ್ರಾಯ.
 
ಕೃಷಿಗೆ ಕನಿಷ್ಠ 55 ಟಿಎಂಸಿ ನೀರು ಬೇಕು
 
ನೆರೆಯ ಆಂಧ್ರ, ತೆಲಂಗಾಣ ಸೇರಿ ಅವಿಭಜಿತ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಿಗೆ ಒಂದು ಬೆಳೆಗೆ ಕನಿಷ್ಠ 40 ಟಿಎಂಸಿ ಅಡಿಗೂ ಹೆಚ್ಚು ನೀರು ಬೇಕಾಗಲಿದೆ. ಹಾಗಾಗಿ ಜಲಾಶಯದಲ್ಲಿ ಕನಿಷ್ಠ 55 ಟಿಎಂಸಿ ಅಡಿ ನೀರು ಸಂಗ್ರಹವಿದ್ದಲ್ಲಿ ಐಸಿಸಿ ಸಭೆಯಲ್ಲಿ ಮುಂದೆ ನೀರು ಹರಿದು ಬರುವ ಪ್ರಮಾಣವನ್ನು ಆಧರಿಸಿ ನಿರ್ಣಯಗಳನ್ನು ಕೈಗೊಂಡು ಕೃಷಿ ಚಟುವಟಿಕೆಗೆ ನೀರು ಕೊಡಬಹುದು. ಆದರೆ, ಜಲಾಶಯದಲ್ಲಿ ಸದ್ಯ 27 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಇನ್ನೊಂದು ಐದಾರು ಟಿಎಂಸಿಯಷ್ಟು ನೀರು ಹರಿದು ಬರಬಹುದು. ಇಷ್ಟು ಪ್ರಮಾಣದಲ್ಲಿ ಐಸಿಸಿ ಸಭೆ ನಡೆಸಿ ನಿರ್ಣಯ ಕೈಗೊಳ್ಳಲೂ ಆಗಲ್ಲ. ಇನ್ನೊಂದು 10-15 ದಿನಗಳ ಕಾಲ ನೀರು ಹರಿದು ಬಂದರೆ ಅನುಕೂಲವಾಗುತ್ತಿತ್ತು ಎನ್ನುತ್ತಾರೆ ತಂತ್ರಜ್ಞರು. ಸದ್ಯ ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ 1605.56 ಅಡಿಯಿದ್ದು, 89964 ಕ್ಯೂಸೆಕ್‌ ಒಳಹರಿವು ಇದ್ದು, 255 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. 27.48 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಸೈಕ್ಲೋನ್‌ ರೂಪದಲ್ಲಿ ಕೃಪೆ ತೋರಿರುವ ವರುಣ, ಮುಂಗಾರನ್ನು ಮುಂದೂಡುವನೋ ಕೃಪೆ ತೋರುವನೋ ಕಾದು ನೋಡಬೇಕಾಗಿದೆ.
 
ಮುಂಗಾರು ಹಂಗಾಮುಗೂ ಮುನ್ನ ಸೈಕ್ಲೋನ್‌ ಬರಬಾರದು. ಇದರಿಂದ ಮಾನ್ಸೂನ್‌ ಮುಂದೂಡುವ ಸಾಧ್ಯತೆಗಳು ದಟ್ಟವಾಗಿದೆ. 19 ವರ್ಷಗಳ ಹಿಂದೆಯೂ ಅವಧಿಗೆ ಮುನ್ನವೇ ಸೈಕ್ಲೋನ್‌ ಪರಿಣಾಮದಿಂದ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು, ಅಂದು ಎರಡನೇ ಬೆಳೆಗೆ ನೀರು ಕೊಡಲಾಗಿಲ್ಲ. ಅಲ್ಲದೇ, ಸೈಕ್ಲೋನ್‌ ಪರಿಣಾಮದಿಂದ ಜಲಾಶಯಕ್ಕೆ ನಾಲ್ಕು ದಿನಗಳಲ್ಲಿ 20ಕ್ಕೂ ಹೆಚ್ಚು ಟಿಎಂಸಿ ನೀರು ಹರಿದು ಬಂದಿದ್ದು, ಇನ್ನು 10-15 ದಿನಗಳು ಮುಂದುವರೆದಿದ್ದರೆ ಅನುಕೂಲವಾಗುತ್ತಿತ್ತು. ಇದೀಗ ಸೈಕ್ಲೋನ್‌ ಕಡಿಮೆಯಾಗಿದ್ದು, ಮುಂಗಾರು ಹಂಗಾಮನ್ನೇ ಅವಲಂಬಿಸಬೇಕಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ