ಪುತ್ತೂರು: ಕೆಲವು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಮುರ ಬಳಿ ನಡೆದ ಖಾಸಗಿ ಬಸ್ ಮತ್ತು ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಅಪೂರ್ವ ಎಂಬ 30 ವರ್ಷದ ಗೃಹಿಣಿ ಅಪೂರ್ವ ಸತತ 134 ದಿನಗಳ ಹೋರಾಟದ ಬಳಿಕ ಇಹಲೋಕ ತ್ಯಜಿಸಿದ್ದಾರೆ. ಆಕೆಯ ಸಾವು ಎಂಥವರ ಮನಸ್ಸೂ ಮರುಗುವಂತೆ ಮಾಡುತ್ತದೆ.
ತಮ್ಮ ತಂದೆ ಮತ್ತು ಪುಟಾಣಿ ಮಗಳ ಜೊತೆ ಕಾರಿನಲ್ಲಿ ತೆರಳುತ್ತಿದ್ದ ಅಪೂರ್ವ ನಿನ್ನೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅಪಘಾತವಾದಾಗ ತಂದೆಗೆ ಗಾಯಗಳಾಗಿದ್ದರೆ ಮಗಳು ಪವಾಡ ಸದೃಶಳಾಗಿ ಪಾರಾಗಿದ್ದಳು. ಆದರೆ ಅಪೂರ್ವಗೆ ತಲೆಗೇ ಗಂಭೀರ ಗಾಯವಾಗಿತ್ತು.
ಆಕೆಯ ಪತಿ ಆಶಿಶ್ ಸಾರಡ್ಕ ಫೇಸ್ ಬುಕ್ ಮುಖಾಂತರ ತನ್ನ ಪತ್ನಿಯ ಪ್ರತಿ ದಿನದ ಪರಿಸ್ಥಿತಿ ಬಗ್ಗೆ ದುಃಖದಿಂದಲೇ ಬರೆಯುತ್ತಿದ್ದರು. ನನ್ನ ಪತ್ನಿಯ ಉಳಿವಿಗಾಗಿ ಪ್ರಾರ್ಥನೆ ಮಾಡಿ ಎಂದು ಕೇಳುತ್ತಿದ್ದರು. ದುಡ್ಡು ಎಷ್ಟೇ ಖರ್ಚಾದರೂ ತೊಂದರೆಯಿಲ್ಲ. ನನ್ನ ಪತ್ನಿಯನ್ನು ಉಳಿಸಿಕೊಡಿ ಎಂದು ವೈದ್ಯರಿಗೂ ಕೇಳಿಕೊಂಡಿದ್ದರು. ತಮ್ಮ ಕೆಲಸ-ಕಾರ್ಯವನ್ನೆಲ್ಲಾ ಬಿಟ್ಟು ಇಷ್ಟೂ ದಿನ ಪತ್ನಿಯ ಸೇವೆ ಮಾಡುತ್ತಾ ಆಕೆ ಮತ್ತೆ ಬದುಕಿ ಬರುತ್ತಾಳೆಂಬ ವಿಶ್ವಾಸದಲ್ಲಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದ ಆಶಿಶ್ ಸಾರಡ್ಕ, ಅಪೂರ್ವ ಮತ್ತು ಮುದ್ದಾದ ಮಗಳ ಫೋಟೋ, ವಿಡಿಯೋ ನೋಡುವಾಗ ಕರುಳು ಚುರುಕ್ ಎನ್ನದೇ ಇರಬಹುದು.
ಅಪೂರ್ವ ಬದುಕಿ ಬರಬೇಕೆಂದು ಆಶಿಶ್ ಸಾರಡ್ಕ ಮಾಡದ ಪೂಜೆಗಳಿಲ್ಲ, ನಂಬದ ದೇವರಿಲ್ಲ. ಆದರೆ ಅಪಘಾತವಾದಾಗಿನಿಂದ ಮಾತನಾಡುವ ಸ್ಥಿತಿಯಲ್ಲೂ ಇಲ್ಲದ ಪತ್ನಿಯನ್ನು ಅವರು ನೋಡಿಕೊಂಡಿದ್ದು ಎಲ್ಲರಿಗೂ ಮಾದರಿ.
ಆದರೆ ನಿನ್ನೆ ಎಲ್ಲಾ ಪ್ರಯತ್ನಗಳೂ ನಿಷ್ಫಲವಾಗಿದ್ದು, ಪುಟ್ಟ ಕಂದಮ್ಮ ಮತ್ತು ಜೀವಕ್ಕಿಂತ ಹೆಚ್ಚು ಪ್ರೀತಿಸುವ ಪತಿ, ಮನೆಯವರನ್ನು ಬಿಟ್ಟು ಅಪೂರ್ವ ಈ ಲೋಕವನ್ನೇ ಬಿಟ್ಟು ನಡೆದಿದ್ದಾರೆ. ಇದೀಗ ಸಾವಿನ ಬಳಿಕವೂ ಪತ್ನಿಗೆ ಅರ್ಥಪೂರ್ಣವಾಗಿ ವಿದಾಯ ನೀಡಲು ಆಶಿಶ್ ಮುಂದಾಗಿದ್ದಾರೆ. ಇದಕ್ಕಾಗಿ ಆಕೆ ಹೆಚ್ಚು ಇಷ್ಟಪಡುತ್ತಿದ್ದ, ಆಡಿ ಬೆಳೆದ ಪುತ್ತೂರು ಸಮೀಪದ ಅಂಡೇಪುಣಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತಿದೆ. ಆಕೆಗೆ ಯಾರೂ ಮತ್ತೆ ಹುಟ್ಟಿ ಬಾ ಎನ್ನಬೇಡಿ, ಆಕೆಗೆ ಮೋಕ್ಷ ಸಿಗಲಿ ಎಂದು ಪತಿ ಆಶಿಶ್ ಸಾರಡ್ಕ ಬೇಸರದಿಂದಲೇ ಬರೆದುಕೊಂಡಿದ್ದಾರೆ.