ಅಸಾನಿ' ಚಂಡಮಾರುತದ ಎಫೆಕ್ಟ್: ಮುಂದಿನ 48 ಗಂಟೆಗಳ ಕಾಲ ರಾಜ್ಯದಲ್ಲಿ ಭಾರಿ ಮಳೆ

ಭಾನುವಾರ, 20 ಮಾರ್ಚ್ 2022 (20:45 IST)
ಮುಂದಿನ 48 ಗಂಟೆಗಗಳು ರಾಜಧಾನಿ ಸೇರಿದಂತೆ ಕರ್ನಾಟಕದ ವಿವಿಧಡೆ ಗುಡುಗು ಸಹಿತ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ
 
ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಹೇಳಿದೆ.
 
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಅಸಾನಿ ಚಂಡಮಾರುತದ ಪರಿಣಾಮದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮೀನುಗಾರರಿಗೆ ಮುಂದಿನ 24 ಗಂಟೆ ಯಾವುದೇ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿಲ್ಲವಾದರೂ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ.
 
ಬೆಂಗಳೂರು, ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಮತ್ತು ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
 
ಮಧ್ಯಾಹ್ನದ ವೇಳೆ ನಗರದಲ್ಲಿ ಭಾನುವಾರ 30 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಮುಂದಿನ 48 ಗಂಟೆಗಳು ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
 
ಎರಡು ದಿನದಿಂದ ವರುಣಾರ್ಭಟ:
 
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶುಕ್ರವಾರ ಸಂಜೆಯಿಂದ ಮಳೆಯಾಗುತ್ತಿದೆ. ಬೇಸಿಗೆಯಲ್ಲಿ ಮಳೆ ಬಂದಿರುವುದಕ್ಕೆ ಜನರು ಮತ್ತು ರೈತಾಪಿ ವರ್ಗ ಸಂತಸಗೊಂಡಿದ್ದಾರೆ. ಕೆಲ ಸಿಡಿಲು, ಗಾಳಿಯ ಆರ್ಭಟ ಕೂಡ ಕಂಡು ಬಂದಿದೆ.
 
ಗಾಳಿಯ ಅಬ್ಬರಕ್ಕೆ  ಹಾನಿ:
 
ಗಾಳಿಯ ಅಬ್ಬರಕ್ಕೆ ಮನೆ, ಕಟ್ಟಡಗಳ ಚಾವಣಿಗೆ ಹಾನಿಯಾಗಿದೆ. ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಕಡೆ ಅಡಕೆ, ತೆಂಗು ಬೆಳೆಗೆ ಹಾನಿಯಾಗಿದೆ. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿಯೂ ಮಳೆಯಾಗಿದೆ.
 
ಸಿಲಿಕಾನ್ ಸಿಟಿಯಲ್ಲಿ ಮೊದಲ ವರ್ಷಧಾರೆ:
 
ಈ ವರ್ಷದ ಮೊದಲ ಮಳೆ ಬೆಂಗಳೂರು ನಗರದಲ್ಲಿ ನಿನ್ನೆ (ಶನಿವಾರ) ಸುರಿದಿದೆ. ಕೆಲವು ಪ್ರದೇಶಗಳಲ್ಲಿ  ರಸ್ತೆಯ ತುಂಬೆಲ್ಲನೀರು ಹರಿದು ಹೋಗುವಷ್ಟು ಮಳೆಯಾಗಿದೆ. ಕೆಲವು ಬಡಾವಣೆಗಳಲ್ಲಿ ತುಂತುರು ಮಳೆಯಾಗಿದೆ. ಜನರು ಮಳೆ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ