ಬೆಂಗಳೂರು: ಉನ್ನತ ಶಿಕ್ಷಣ, ಐಟಿ- ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವರಾಗಿದ್ದ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿಎನ್ ಅಶ್ವತ್ಥನಾರಾಯಣ ಅವರು 700 ದಿನಗಳ ತಮ್ಮ ಅಧಿಕಾರಾವಧಿಯಲ್ಲಿ ಒಟ್ಟು 3,760 ಕಡತಗಳನ್ನು ವಿಲೇವಾರಿ ಮಾಡಿ ದಾಖಲೆ ಸ್ಥಾಪಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ಅವರು 26ರಂದು ರಾಜೀನಾಮೆ ನೀಡುವವರೆಗೆ ಅಶ್ವತ್ಥನಾರಾಯಣ ಅವರು ತಮ್ಮ ಇಲಾಖೆಗಳಲ್ಲಿದ್ದ ಎಲ್ಲ ಕಡತಗಳನ್ನು ವಿಲೇವಾರಿ ಮಾಡಿ, ಬಾಕಿ ಕಡತಗಳ ಪ್ರಮಾಣವನ್ನು ಶೂನ್ಯಕ್ಕೆ ತಂದಿದ್ದಾರೆ.
ಇ-ಆಫೀಸ್ (ಕಾಗದ ರಹಿತ ಕಡತ) ವ್ಯವಸ್ಥೆಯ ಮೂಲಕವೂ ಸಾವಿರಾರು ಕಡತಗಳನ್ನು ಪಾರದರ್ಶಕವಾಗಿ ವಿಲೇವಾರಿ ಮಾಡಲಾಗಿದೆ. ಇ- ಕಚೇರಿ ಮೂಲಕವೇ ವಿಶ್ವವಿದ್ಯಾಲಯಗಳ ಕಡತಗಳ ವಿಲೇವಾರಿ ಕೂಡ ಆರಂಭವಾಗಿದೆ.
ಅಶ್ವಥ್ ನಾರಾಯಣ ತಾವು ಅಧಿಕಾರ ಸ್ವೀಕರಿಸಿದಾಗಿನಿಂದ ನಿರ್ಗಮಿಸುವ ದಿನದವರೆಗೂ ಒಟ್ಟು 3,760 ಕಡತಗಳನ್ನು ವಿಲೇವಾರಿ ಮಾಡಿದ್ದಾರೆ. ಬಂದ ಕಡತಗಳನ್ನು ಪರಿಶೀಲಿಸಿ ತ್ವರಿತವಾಗಿ ವಿಲೇವಾರಿ ಮಾಡಿದ್ದಾರೆ.
ಉನ್ನತ ಶಿಕ್ಷಣ ಇಲಾಖೆಯಲ್ಲಿ ಒಟ್ಟು 1,746 ಮ್ಯಾನುಯಲ್ ಕಡತಗಳು ಬಂದಿದ್ದು, ಅಷ್ಟನ್ನೂ ಅಶ್ವತ್ಥನಾರಾಯಣ ಅವರು ವಿಲೇವಾರಿ ಮಾಡಿದ್ದಾರೆ. ಜತೆಗೆ, 1,441 ಇ-ಕಡತಗಳು ಬಂದಿದ್ದು, ಅವೂ ವಿಲೇವಾರಿ ಆಗಿವೆ.
ಎಲೆಕ್ಟ್ರಾನಿಕ್ಸ್ ಮತ್ತು ಐಟಿ-ಬಿಟಿ ಇಲಾಖೆಯಲ್ಲಿ 62 ಮ್ಯಾನುಯಲ್ ಕಡತಗಳು, 86 ಇ-ಕಡತಗಳು ಮಾಜಿ ಡಿಸಿಎಂ ಅವರಿಂದ ವಿಲೇವಾರಿ ಆಗಿವೆ. ಕೌಶಲ್ಯಾಭಿವೃದ್ಧಿ ಇಲಾಖೆಯಲ್ಲಿ 84 ಮ್ಯಾನುಯಲ್ ಕಡತಗಳು, 96 ಇ-ಕಡತಗಳು ಬಂದಿದ್ದವು. ವೈದ್ಯಕೀಯ ಶಿಕ್ಷಣ ಇಲಾಖೆಗೆ ಬಂದಿದ್ದ 245 ಮ್ಯಾನುಯಲ್ ಕಡತಗಳನ್ನೂ ಡಾ.ಅಶ್ವತ್ಥನಾರಾಯಣ ಅವರು ಕ್ಲಿಯರ್ ಮಾಡಿದ್ದಾರೆ.
ಒಟ್ಟಾರೆಯಾಗಿ ಅವರು 2,137 ಮ್ಯಾನುಯಲ್ ಕಡತಗಳು, 1,633 ಇ-ಕಡತಗಳನ್ನು ಬಾಕಿ ಇಟ್ಟುಕೊಳ್ಳದೇ ವಿಲೇವಾರಿ ಮಾಡಿದ್ದಾರೆ. ಕೆಲವೊಮ್ಮೆ ರಾತ್ರಿ ಹತ್ತು ಗಂಟೆಯವರೆಗೂ ಕಚೇರಿಯಲ್ಲೇ ಕೂತು ಕಡತಗಳನ್ನು ವಿಲೇವಾರಿ ಮಾಡಿದ್ದರು.