ವಿವಸ್ತ್ರಗೊಳಿಸಿ ಯುವಕನ ಮೇಲೆ ಹಲ್ಲೆ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಂಜನೇಯ ಭರವಸೆ

ಬುಧವಾರ, 18 ಜನವರಿ 2017 (17:42 IST)
ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ದಲಿತ ಯುವಕನನ್ನು ನಗ್ನಗೊಳಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೇ ತಪ್ಪು ಮಾಡಿದ್ದರು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಭರವಸೆ ನೀಡಿದ್ದಾರೆ.
 
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಬ್ಬಿ ಪಟ್ಟಣದಲ್ಲಿ ದಲಿತ ಯುವಕನನ್ನು ನಗ್ನಗೊಳಿಸಿ ಹಲ್ಲೆ ಮಾಡಿದ ಪ್ರಕರಕ್ಕೆ ಸಂಬಂಧಿಸಿದಂತೆ ವರದಿ ತರಿಸಿಕೊಳ್ಳುತ್ತೇನೆ. ಯಾರೇ ತಪ್ಪು ಮಾಡಿದ್ದರು ಕಠಿಣ ಕ್ರಮ ಕೈಗೊಳ್ಳುತೇನೆ ಎಂದರು.
 
ಒಂದು ವೇಳೆ ದಲಿತ ಯುವಕ ತಪ್ಪು ಮಾಡಿದ್ದರೆ ಪೊಲೀಸ್‌ರಿಗೆ ದೂರು ನೀಡಬಹುದಿತ್ತು. ಈ ರೀತಿ ಕಾನೂನು ಕೈಗೆತ್ತಿಕೊಂಡು ಹಲ್ಲೆ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ಕಿಡಿಕಾರಿದರು.
 
ಪೇಂಟಿಂಗೆ ಕೆಲಸ ಮಾಡುತ್ತಿದ್ದ ಯುವಕ ಅಭಿಷೇಕ್ ಗುಬ್ಬಿ ಪಟ್ಟಣದ ಸುಭಾಷ್ ನಗರದ ನಿವಾಸಿ. ಈತ ಅಪ್ರಾಪ್ತ ಯುವತಿಯನ್ನು ನಿರಂತರವಾಗಿ ಚುಡಾಯಿಸುತ್ತಿದ್ದ ಎನ್ನಲಾಗಿದ್ದು, ಇದರಿಂದ ರೊಚ್ಚಿಗೆದ್ದು ಯುವತಿಯ ಪೋಷಕರು, ಯುವತಿಯಿಂದಲೇ ಆತನಗಿ ಪೋನ್ ಮಾಡಿಸಿ ತೋಟದ ಮನೆಗೆ ಕರೆಸಿಕೊಂಡಿದ್ದಾರೆ. ತದನಂತರ ಈತನನ್ನು ಕಟ್ಟಿ ಹಾಕಿ, ವಿವಸ್ತ್ರಗೊಳಿಸಿ, ಚಪ್ಪಲಿ ಹಾರ ಹಾಕಿ, 'ಗುಬ್ಬಿ ಯುವತಿಯರನ್ನು ಕೆಣಕಿದರೆ ಇದೆ ಗತಿ' ಎಂದು ಬರೆದ ಸ್ಲೇಟ್ ನೀಡಿ ಅಮಾನವೀಯವಾಗಿ ವರ್ತಿಸಿದ್ದಾರೆ. ಈ ಹೇಯ ಕೃತ್ಯದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ