ನವದೆಹಲಿ: ಅಮೆರಿಕಾದ ಸುಂಕ ಒತ್ತಡಕ್ಕೆ ಮಣಿದು ರಷ್ಯಾದಿಂದ ಕಚ್ಚಾ ತೈಲ ಖರೀದಿ ನಿಲ್ಲಿಸಿದೆಯಾ ಭಾರತ? ಡೊನಾಲ್ಡ್ ಟ್ರಂಪ್ ಮತ್ತೊಂದು ಹೇಳಿಕೆ ಈಗ ಸಂಚಲನ ಮೂಡಿಸಿದೆ.
ವ್ಯಾಪಾರ ನೀತಿಗೆ ಬಗ್ಗದ ಭಾರತದ ಮೇಲೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ 25% ಸುಂಕ ವಿಧಿಸಿ ಸೇಡು ತೀರಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಭಾರತದ ಶತ್ರುರಾಷ್ಟ್ರ ಪಾಕಿಸ್ತಾನದ ಜೊತೆ ತೈಲ ಒಪ್ಪಂದ ಮಾಡಿಕೊಂಡು ಟ್ರಂಪ್ ತಮ್ಮ ಆಕ್ರೋಶ ಹೊರಹಾಕಿದ್ದರು.
ಇದರ ಬೆನ್ನಲ್ಲೇ ನಮ್ಮ ಹಿತಾಸಕ್ತಿ ಕಾಪಾಡಲಿದ್ದೇವೆ ಎಂದು ಭಾರತವೂ ತಿರುಗೇಟು ನೀಡಿತ್ತು. ಜೊತೆಗೆ ಅಮೆರಿಕಾದಿಂದ ಖರೀದಿಸಬೇಕಿದ್ದ ಎಫ್ 35 ಯುದ್ಧ ವಿಮಾನ ಖರೀದಿ ಡೀಲ್ ಯೋಜನೆಯಿಂದ ಹಿಂದೆ ಸರಿದಿರುವ ಸುದ್ದಿ ಬಂದಿತ್ತು.
ಇದರ ಬೆನ್ನಲ್ಲೇ ಈಗ ಡೊನಾಲ್ಡ್ ಟ್ರಂಪ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಭಾರತದ ಮೇಲೆ ಭಾರತಕ್ಕೆ ದಂಡ ವಿಧಿಸುವ ಬಗ್ಗೆ ಮತ್ತು ಮೋದಿ ಜೊತೆ ಮಾತನಾಡುವ ಬಗ್ಗೆ ಯಾವ ಯೋಜನೆ ಹಾಕಿಕೊಂಡಿದ್ದೀರಿ ಎಂದು ಟ್ರಂಪ್ ಗೆ ಮಾಧ್ಯಮ ಪ್ರಶ್ನೆ ಮಾಡಿದೆ.
ಇದಕ್ಕೆ ಉತ್ತರಿಸಿರುವ ಅವರು ರಷ್ಯಾದಿಂದ ಇನ್ಮುಂದೆ ಭಾರತ ತೈಲ ಖರೀದಿಸಲ್ಲ ಎಂಬ ಸುದ್ದಿ ಕೇಳಿಬರುತ್ತಿದೆ. ಇದು ನಿಜವೋ ಸುಳ್ಳೋ ನನಗೆ ಗೊತ್ತಿಲ್ಲ. ಒಂದು ವೇಳೆ ನಿಜವಾದರೆ ಅದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ. ಆದರೆ ಭಾರತ ಇದೆಲ್ಲಾ ಬೆಳವಣಿಗೆ ನಡುವೆಯೂ ರಷ್ಯಾ ಜೊತೆಗಿನ ಸಂಬಂಧ ಸ್ಥಿರವಾಗಿದೆ. ಇದು ಇದೇ ರೀತಿ ಮುಂದುವರಿಯುತ್ತದೆ ಎಂದಿದೆ. ಅಲ್ಲದೆ, ಅಮೆರಿಕಾ ಸುಂಕದಿಂದ ಭಾರತದ ಜಿಡಿಪಿ ಮೇಲೆ ದೊಡ್ಡ ಪರಿಣಾಮವೇನೂ ಆಗದು. ಶೇ.0.2% ರಷ್ಟು ಹೊಡೆತ ಬೀಳಬಹುದಷ್ಟೇ. ಇದನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ ಎಂದಿದೆ. ಹೀಗಾಗಿ ಟ್ರಂಪ್ ಮತ್ತೆ ಭಾರತದ ವಿಚಾರದಲ್ಲಿ ಅನಗತ್ಯ ಹೇಳಿಕೆ ನೀಡಿದರಾ ಎಂಬ ಸಂಶಯ ಮೂಡುತ್ತಿದೆ.