ಇನ್ನಾದರೂ ಪಾಕ್ ಪಾಠ ಕಲಿಯಲಿ: ಜಗದೀಶ್ ಶೆಟ್ಟರ್

ಗುರುವಾರ, 29 ಸೆಪ್ಟಂಬರ್ 2016 (20:15 IST)
ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿದ ಭಾರತೀಯ ಸೇನಾಪಡೆಗಳು ಸೀಮಿತ ದಾಳಿ ನಡೆಸಿ ಉಗ್ರರ ಹತ್ಯೆಗೈದ ನಂತರವಾದರೂ ಪಾಕಿಸ್ತಾನ ಪಾಠ ಕಲಿಯಲಿ. ಪ್ರಧಾನಿ ಮೋದಿ ತಾವು ನೀಡಿದ ಹೇಳಿಕೆಯಂತೆ ಪ್ರತೀಕಾರ ತೀರಿಸಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
 
ಕಾಶ್ಮೀರದ ಉರಿ ಪ್ರದೇಶದಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಕೇರಳದ ಕೋಳಿಕ್ಕೋಡ್‌ನಲ್ಲಿ ನಡೆದ ಕಾರ್ಯಕಾರಣಿ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದರು. ಇದೀಗ ಅವರು ಅದನ್ನು ಮಾಡಿ ತೋರಿಸಿದ್ದಾರೆ ಎಂದು  ಮೋದಿ ನಿಲುವನ್ನು ಸ್ವಾಗತಿಸಿದ್ದಾರೆ.
 
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ನಿರ್ದೇಶನದ ಮೇರೆಗೆ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದ ಒಳಗೆ ನುಗ್ಗಿ ಉಗ್ರರ ರುಂಡವನ್ನು ಚೆಂಡಾಡಿದೆ. ಇನ್ನಾದರು ಉಗ್ರರನ್ನು ಸಾಕುವುದನ್ನು ಪಾಕಿಸ್ತಾನ ಬಿಡಬೇಕು ಎಂದು ಒತ್ತಾಯಿಸಿದರು.
 
ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ......
 
ಸುಪ್ರೀಂಕೋರ್ಟ್ ಸೂಚನೆಯಂತೆ ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಭಯ ರಾಜ್ಯಗಳ ಅಧಿಕಾರಿಗಳೊಂದಿಗೆ ಸಂಧಾನ ಸಭೆ ನಡೆಸಿದ್ದಾರೆ. ನಾನು ಸಿಎಂ ಆದ ಸಮಯದಲ್ಲಿ ಬೆಂಗಳೂರಿನಲ್ಲಿ ಸಂಧಾನ ಸಭೆ ನಡೆಸಿದ್ದೆ. ಆದರೆ, ನಮ್ಮ ನಿಲುವಿಗೆ ತಮಿಳುನಾಡು ಸಿಎಂ ಜಯಲಲಿತಾ ಒಪ್ಪಿಗೆ ಸೂಚಿಸಿರಲಿಲ್ಲ. ಅದೇ ರೀತಿ ಈಗ ಸಹ ನಡೆದುಕೊಂಡಿದ್ದಾರೆ ಎಂದರು.
 
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ದುರದೃಷ್ಟಕರ. ಸಂಕಷ್ಟದ ಸಮಯದಲ್ಲೂ ತಮಿಳುನಾಡಿಗೆ ನೀರು ಹರಿಸಿದ್ದೇವೆ. ಇನ್ನೂ ಮುಂದೆ ನೀರು ಬಿಡಲು ಸಾಧ್ಯವಿಲ್ಲ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಖಡಕ್ ಸಂದೇಶ ರವಾನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ