ಆಹಾರ ನಿರೀಕ್ಷಕರ ಕೊಲೆ ಯತ್ನ; ಮೂವರ ಬಂಧನ

ಗುರುವಾರ, 30 ಮೇ 2019 (18:22 IST)
ಪಡಿತರ ಅಕ್ಕಿ ಲಾರಿಗಳಲ್ಲಿ ಅಕ್ರಮ ಸಾಗಾಟವಾಗುತ್ತಿದೆ ಮಾಹಿತಿ ನೀಡುತ್ತೇನೆ ಎಂದು ಕರೆದು ಆಹಾರ ನಿರೀಕ್ಷಕರ ಮೇಲೆ ಕೊಲೆ ಪ್ರಯತ್ನ ನಡೆಸಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. 

ದಾವಣಗೆರೆ ಆರ್ ಎಂ ಸಿ ಯಾರ್ಡ್ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಬ್ದುಲ್ ರೆಹಮಾನ್(ಅಬು)(32), ಮಹಮ್ಮದ್ ಯೂನಸ್(24), ಜಾಫರ್(21)  ಬಂಧಿತ ಆರೋಪಿಗಳಾಗಿದ್ದಾರೆ.

ಘಟನೆ ಹಿನ್ನಲೆ: ಆವರಗೆರೆ ಹೊರವಲಯದ ಉತ್ತಮ್ ಚಂದ್ ಬಡಾವಣೆಯಲ್ಲಿ ಇದೇ 24 ರಂದು ರಾತ್ರಿ ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಾಟ ಆಗುತ್ತಿದೆ ಆ ಕುರಿತು ಮಾಹಿತಿ ನೀಡುತ್ತೇನೆ ಎಂದು ದಾವಣಗೆರೆ ನಿವಾಸಿ ಅಬು ತಮ್ಮ ಬೈಕಿನಲ್ಲಿ ಚಿತ್ರದುರ್ಗ ತಾಲ್ಲೂಕು ಆಹಾರ ನಿರೀಕ್ಷಕ ತಿಪ್ಪೇಶಪ್ಪ ಇವರನ್ನು ಕರೆದುಕೊಂಡು ಹೋದಂತೆ ಮಾಡಿದ್ದರು. ಅಲ್ಲಿ ಅಬು ಹಾಗೂ ಇಬ್ಬರು ಸ್ನೇಹಿತರು ಮಾರಕಾಸ್ತ್ರ ಗಳಿಂದ ಹೊಡೆದು ಹಲ್ಲೆ ನಡೆಸಿ ಕೊಲೆಗೆ ಪ್ರಯತ್ನಿಸಿದ್ದರು. ಅಲ್ಲಿಂದ ತಪ್ಪಿಸಿಕೊಂಡು ತಿಪ್ಪೇಶಪ್ಪ ಸಾರ್ವಜನಿಕರನ್ನು ಕೂಗಿ ಕರೆದಾಗ ತಕ್ಷಣ ಎಲ್ಲರು ಪರಾರಿ ಆಗಿದ್ದರು ಎಂದು ತಿಪ್ಪೇಶಪ್ಪ ದೂರು ದಾಖಲಿಸಿದ್ದರು.

ಹಳೇ ದ್ವೇಷದ ಹಿನ್ನಲೆ ಲಾಂಗ್ ಬೀಸಿದ್ದ ಕಿರಾತಕರು: ಈ ಹಿಂದೆ ಅಕ್ರಮ ಪಡಿತರ ಅಕ್ಕಿ ಸಾಗಾಟ ಮಾಡಿದ್ದ ಅಬು ಇವನ ಲಾರಿ ಮೇಲೆ ತಿಪ್ಪೇಶಪ್ಪ ದಾವಣಗೆರೆಯಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಪರಿಚಯವಾಗಿದ್ದ ಅಬು, ಬೇರೆ ಲಾರಿಗಳಲ್ಲಿ ಅಕ್ಕಿ ಸಾಗಾಟ ಆಗ್ತಿದೆ ಮಾಹಿತಿ ನೀಡುತ್ತೇನೆ ಎಂದು ಆಹಾರ ನಿರೀಕ್ಷಕ ತಿಪ್ಪೇಶಪ್ಪರನ್ನು ಕರೆದಿದ್ದಾನೆ. ಬಳಿಕ ಹಳೇ ದ್ವೇಷ ಹಿನ್ನಲೆ ಅಬು ಹಾಗೂ ಇನ್ನಿಬ್ಬರು ಯುವಕರು ಸೇರಿ ತಿಪ್ಪೇಶಪ್ಪ ಮೇಲೆ ಲಾಂಗ್ ಬೀಸಿದ್ದಾರೆ ಎಂದು ಹೇಳಲಾಗಿದೆ.‌

ಈ ವೇಳೆ ಅಲ್ಲಿಂದ ಓಡಿ ಬಂದ ತಿಪ್ಪೇಶಪ್ಪ ಸಾರ್ವಜನಿಕರ ಸಹಾಯದಿಂದ ಪಾರಾಗಿದ್ದಾರೆ. ಘಟನೆ ಹಿನ್ನಲೆ ಆರ್ ಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಎಸ್ಪಿ ಆರ್ ಚೇತನ್ ಮಾರ್ಗದರ್ಶನದಲ್ಲಿ ಪೊಲೀಸ್ ತಂಡ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದೆ. ಕೃತ್ಯಕ್ಕೆ ಬಳಸಿದ್ದ ಬೈಕ್ ಗಳು, ಲಾಂಗ್ ವಶಕ್ಕೆ ಪಡೆದು ತನಿಖೆ ಮುಂದುವರೆಸಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ