ಬೆಂಗಳೂರು: ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಬಿಜೆಪಿ ತೊರೆಯವುದಿಲ್ಲ ಮತ್ತು ಕಾಂಗ್ರೆಸ್ ಪಕ್ಷ ಸೇರುವ ವಿಚಾರವನ್ನೂ ಅವರು ಮಾಡಲಾರರು; ಬಿಜೆಪಿಯಲ್ಲೇ ಇದ್ದು ಪಕ್ಷ ಕಟ್ಟುವ ಕೆಲಸ ಮಾಡಲಿದ್ದಾರೆ ಎಂದು ಮಾಜಿ ಶಾಸಕ ರಾಜುಗೌಡ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ಶ್ರೀರಾಮುಲು ಅವರು ದುಡಿಯಲಿದ್ದಾರೆ ಎಂದರು. ರಾಮುಲು ಅವರು ಮನಸ್ಸು ಮಾಡಿದರೆ ಕಾಂಗ್ರೆಸ್ಸಿನ ಸಚಿವರು, ಶಾಸಕರನ್ನು ಕರೆದುಕೊಂಡು ಬರುವ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.
ಬಿ.ಶ್ರೀರಾಮುಲು ಅವರು ಕಾಂಗ್ರೆಸ್ಸಿಗೆ ಸೇರಲಿದ್ದಾರೆ ಎಂಬ ವಿಷಯ ಮಾಧ್ಯಮಗಳಲ್ಲಿ ಬರುತ್ತಿದೆ. ಇದು ಬಹಳಷ್ಟು ಚರ್ಚೆಯಾಗುತ್ತಿದೆ. ರಾಮುಲು ಅವರ ಜೊತೆ ನಾನು ಮೊನ್ನೆ ಮಾತನಾಡಿದ್ದೇನೆ. ಅವರು ಮನಸ್ಸಿಗೆ ನೋವು ಮಾಡಿಕೊಂಡಿದ್ದರು. ಶ್ರೀರಾಮುಲು ಅವರು ನಮ್ಮ ಸಮಾಜದಲ್ಲಿ ಪ್ರಶ್ನಾತೀತ ನಾಯಕರು. ಇದರಲ್ಲಿ ಎರಡನೇ ಮಾತಿಲ್ಲ ಎಂದು ತಿಳಿಸಿದರು.
ಪಕ್ಷದ ಹಿರಿಯರಿಗೆ ಯಾರೋ ತಪ್ಪು ಸಂದೇಶ ನೀಡಿದ್ದರಿಂದ ಹಾಗಾಗಿದೆ. ನಾವೆಲ್ಲರೂ ಒಂದೇ ಇದ್ದೇವೆ. ಪಕ್ಷದ ನಾಯಕರು ಎಂದ ಮೇಲೆ ಸ್ವಲ್ಪ ಹೆಚ್ಚು ಕಮ್ಮಿ ಆಗುತ್ತದೆ. ಸಮಾಧಾನದಿಂದ ಇರುವಂತೆ ಹೇಳಿದ್ದು, ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಜಗಳ ಬಗೆಹರಿಯಲಿದೆ
ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರು ಚಿಕ್ಕಂದಿನಿಂದಲೇ ಒಳ್ಳೆಯ ಸ್ನೇಹಿತರು. ಸ್ನೇಹಿತರೆಂದ ಮೇಲೆ ಕೆಲವೊಮ್ಮೆ ಜಗಳ, ವೈಮನಸ್ಸು ಬಂದೇ ಬರುತ್ತದೆ. ಆ ಜಗಳವನ್ನು ಅವರೇ ಬಗೆಹರಿಸಿಕೊಳ್ಳುತ್ತಾರೆ. ಆ ಜಗಳ ಬೇಗನೇ ಬಗೆಹರಿಯಲಿದೆ ಎಂದು ನುಡಿದರು.
ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ ಎಂಬಂತೆ ಅವರ ಜಗಳ ಬೇಗನೆ ಪರಿಹಾರ ಕಾಣಲಿದೆ ಎಂದು ತಿಳಿಸಿದರು. ಪಕ್ಷದ ನಾಯಕರು ಇದರ ಬಗ್ಗೆ ಮಾತನಾಡುವ ಕೆಲಸವನ್ನೂ ಮಾಡುತ್ತಿದ್ದಾರೆ. ಇಬ್ಬರೂ ಪಕ್ಷದ ಮುಖಂಡರಿದ್ದು, ಅದು ವೈಯಕ್ತಿಕ ಜಗಳ. ಅದು ಪಕ್ಷದ ಜಗಳವಲ್ಲ ಎಂದು ಸ್ಪಷ್ಟಪಡಿಸಿದರು.
ಇವರಿಬ್ಬರೂ ಒಂದಾಗಿದ್ದರೆ ಅದು ಶಕ್ತಿ. ಇಬ್ಬರೂ ಬೇರೆ ಇದ್ದರೆ ಶಕ್ತಿ ಆಗುವುದಿಲ್ಲ. ಆದ್ದರಿಂದ ಅವರನ್ನು ಒಂದುಗೂಡಿಸುವ ಕೆಲಸವನ್ನು ನಾವೆಲ್ಲರೂ ತಮ್ಮಂದಿರಾಗಿ ಮಾಡುತ್ತೇವೆ ಎಂದು ತಿಳಿಸಿದರು. ಪಕ್ಷದ ಕಾರ್ಯಕರ್ತರು ಗೊಂದಲಕ್ಕೆ ಈಡಾಗಬಾರದು ಎಂದು ಮನವಿ ಮಾಡಿದರು.
ಬಿಜೆಪಿಯಲ್ಲಿ ಇರುವುದೇ ಒಂದು ಬಣ. ಪಕ್ಷದೊಳಗಿನ ಸಮಸ್ಯೆಯನ್ನು ಪರಿಹರಿಸುವ ಕೆಲಸವನ್ನು ಹೈಕಮಾಂಡ್ ಮಾಡುತ್ತಿದೆ. ಬೇಗನೆ ಈ ವೈಮನಸ್ಸನ್ನು ಪರಿಹರಿಸಿದರೆ ಅದು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಅನುಕೂಲವಾಗಲಿದೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.