ಬೆಂಗಳೂರು: ಮಾನ್ಯ ಅಟಲ್‍ಜೀ ಅವರನ್ನು ಸ್ಮರಿಸುವ ಸ್ಮತಿ ಸಂಕಲನ ಮತ್ತು ಅಭಿಯಾನವು ಜನವರಿ 14ರಿಂದ ಫೆ.15ರವರೆಗೆ ನಡೆಯಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವ ವರ್ಷದ ಅಂಗವಾಗಿ ಈ ಪತ್ರಿಕಾಗೋಷ್ಠಿ ಕರೆಯಲಾಗಿದೆ. ಜನ್ಮ ಶತಮಾನೋತ್ಸವ ವರ್ಷದ ಆಚರಣೆಗೆ ಒಂದು ತಂಡವನ್ನು ರಚಿಸಲಾಗಿದೆ ಎಂದು ವಿವರಿಸಿದರು.
ಬಹುಮುಖಿ ವ್ಯಕ್ತಿತ್ವದ ಅಟಲ್ ಜೀ ಅವರ ಜನ್ಮದಿನವನ್ನು ಡಿಸೆಂಬರ್ 25ರಂದು `ಸುಶಾಸನ' ದಿನವನ್ನಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬೂತ್, ಮಂಡಲ, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಎಂದರು. ಅಟಲ್‍ಜಿ ಅವರ ಪುಸ್ತಕ, ಸಾಹಿತ್ಯಗಳ ಪ್ರದರ್ಶನ, ಮಾರಾಟವೂ ನಡೆಯಲಿದೆ ಎಂದು ವಿವರಿಸಿದರು. ಬರಹಗಾರರ- ಹಿರಿಯ ಕಾರ್ಯಕರ್ತರ ಸನ್ಮಾನ, ಅಟಲ್‍ಜೀ ಅವರ ಅಪಾರ ಕೊಡುಗೆಗಳ ಪ್ರದರ್ಶಿನಿ ನಡೆಯಲಿದೆ ಎಂದು ತಿಳಿಸಿದರು.
ಫೆ.15ರಿಂದ ಮಾರ್ಚ್ 15ರವರೆಗೆ ಜಿಲ್ಲಾ ಮಟ್ಟದಲ್ಲಿ ಅಟಲ್ ವಿರಾಸತ್ ಸಮ್ಮೇಳನ ಆಯೋಜಿಸಲಾಗುವುದು. ಅಲ್ಲಿಯೂ ಅಟಲ್‍ಜೀ ಅವರ ಬಗ್ಗೆ ಹಲವಾರು ಪುಸ್ತಕಗಳ ಪ್ರದರ್ಶನ, ಹಿರಿಯರ ಗೌರವ, ಅಟಲ್‍ಜೀ ಅವರ ಹೋರಾಟದ ದಾರಿಯಲ್ಲಿ ಬೆಳೆದುಬಂದ ವ್ಯಕ್ತಿಗಳಿಗೆ ಗೌರವ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಅಟಲ್‍ಜೀ ಅವರು ದೇಶದ ಅಪರೂಪದ ನಾಯಕ. ಯುವಪೀಳಿಗೆ ಮತ್ತು ನಾಗರಿಕರಿಗೆ ಅವರ ಕೊಡುಗೆ- ಸಾಧನೆಯನ್ನು ಪರಿಚಯಿಸುವ ಪ್ರಯತ್ನ ಇದಾಗಿದೆ ಎಂದು ಹೇಳಿದರು. ಇದಕ್ಕಾಗಿ ಎಲ್ಲ ರೀತಿಯ ತಯಾರಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂಬಂಧಿತ ಸಮಿತಿಯಲ್ಲಿ ಡಾ|| ಎ.ಹೆಚ್. ಶಿವಯೋಗಿಸ್ವಾಮಿ ರಾಜ್ಯ ಪ್ರಮುಖ್, ಜಗದೀಶ್ ಹಿರೇಮನಿ ರಾಜ್ಯ ಸಂಚಾಲಕರು, ಶ್ರೀಮತಿ ಲಕ್ಷ್ಮೀ ಅಶ್ವಿನ್‍ಗೌಡ, ಎನ್.ವಿ. ಫಣೀಶ್, ಬಿದರೆ ಪ್ರಕಾಶ್, ಬಿ.ಸಿ. ಸದಾಶಿವಯ್ಯ, ಪಿ.ಎನ್. ಸದಾಶಿವ, ಶ್ರೀಮತಿ ಮಮತಾ ಉದಯ್, ದಯಾಗನ್ ಧಾರವಾಡಕರ್, ನರಸಿಂಹಮೂರ್ತಿ, ವೆಂಕಟೇಶ ಪ್ರಸಾದ್, ಶಂಕರ್ ಬಿರಾದರ್ (ಸದಸ್ಯರು) ಕಾರ್ಯ ನಿರ್ವಹಿಸುವರು ಎಂದರು.
ರಾಜ್ಯ ಪ್ರಮುಖ್ ಡಾ|| ಎ.ಹೆಚ್. ಶಿವಯೋಗಿಸ್ವಾಮಿ ಅವರು ಮಾತನಾಡಿ, ಜಿಲ್ಲೆ, ಮಂಡಲಗಳಲ್ಲೂ ಈ ಸಂಬಂಧ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು. ಅಟಲ್‍ಜೀ ಅವರ ರಾಜ್ಯ ಪ್ರವಾಸ ಸಂಬಂಧ ಮಾಹಿತಿಯನ್ನೂ ಸಂಗ್ರಹಿಸುತ್ತಿದ್ದೇವೆ. ಫೋಟೊಗಳು, ಸ್ಮರಣಫಲಕಗಳನ್ನು ಸಂಗ್ರಹಿಸುವ ಯೋಜನೆಯೂ ಇದೆ ಎಂದು ತಿಳಿಸಿದರು. ಫೆ. 14ರಂದು ಸಂಗ್ರಹಿತ ಮಾಹಿತಿಯ ಪ್ರದರ್ಶಿನಿಯೂ ನಡೆಯುತ್ತದೆ ಎಂದರು.