ಸಿಎಂ ಬದಲಾವಣೆ ಚರ್ಚೆ ನಡುವೆಯೇ ಸತೀಶ್ ಜಾರಕಿಹೊಳಿ ಭೇಟಿಯಾದ ಬಿವೈ ವಿಜಯೇಂದ್ರ

Krishnaveni K

ಸೋಮವಾರ, 7 ಅಕ್ಟೋಬರ್ 2024 (14:42 IST)
ಬೆಂಗಳೂರು: ಸಿಎಂ ಬದಲಾವಣೆ ಚರ್ಚೆ ಜೋರಾಗಿರುವ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಇಂದು ಕಾಂಗ್ರೆಸ್ ಪ್ರಭಾವೀ ನಾಯಕ ಸತೀಶ್ ಜಾರಕಿಹೊಳಿಯವರನ್ನು ಭೇಟಿ ಮಾಡಿದ್ದು ಕುತೂಹಲ ಮೂಡಿಸಿದೆ.

ಸಿಎಂ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಹೆಸರು ಬಲವಾಗಿ ಕೇಳಿಬರುತ್ತಿರುವ ಬೆನ್ನಲ್ಲೇ ಈ ಭೇಟಿ ನಡೆದಿರುವುದು ವಿಶೇಷ. ಮೊನ್ನೆಯಷ್ಟೇ ಸತೀಶ್ ಜಾರಕಿಹೊಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ ಬಂದಿದ್ದರು. ಅದರ ಬೆನ್ನಲ್ಲೇ ಗೃಹಸಚಿವ ಜಿ ಪರಮೇಶ್ವರ್ ಜೊತೆ ಮೀಟಿಂಗ್ ಮಾಡಿದ್ದು ಎಲ್ಲರೂ ಹುಬ್ಬೇರುವಂತೆ ಮಾಡಿತ್ತು.

ಇದರ ನಡುವೆಯೇ ಇಂದು ಬಿಜೆಪಿ ನಾಯಕರ ನಿಯೋಗ ಸತೀಶ್ ಜಾರಕಿಹೊಳಿಯವರನ್ನು ಭೇಟಿ ಮಾಡಿರುವುದು ಕಾಂಗ್ರೆಸ್ ವಲಯದಲ್ಲಿ ತಲ್ಲಣ ಮೂಡಿಸಿದೆ. ವಿಶೇಷವೆಂದರೆ ಇದೇ ವೇಳೆ ದಸರಾ ಬಳಿಕ ರಾಜ್ಯದಲ್ಲಿ ಸಿಎಂ ಬದಲಾವಣೆ ಖಚಿತ ಎಂದಿದ್ದಾರೆ. ಆದರೆ ಸತೀಶ್ ಜಾರಕಿಹೊಳಿ ಭೇಟಿ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ವಿಜಯೇಂದ್ರ ಹೇಳಿದ್ದೇ ಬೇರೆ.

ನಾನು ಯಾವುದೇ ರಾಜಕೀಯಕ್ಕೆ ಇಲ್ಲಿಗೆ ಬಂದಿಲ್ಲ. ಇಲಾಖೆಯ ಕೆಲಸಕ್ಕಾಗಿ ಬಂದಿದ್ದೇನಷ್ಟೇ. ರಾಜ್ಯದಲ್ಲಿ ಎರಡು ಟೋಲ್ ಬರುತ್ತದೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಇದನ್ನು ಶಿಫ್ಟ್ ಮಾಡಿಕೊಡುವಂತೆ ಕೇಳಿಕೊಳ್ಳಲು ಭೇಟಿಯಾಗಿದ್ದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಆದರೆ ವಿಜಯೇಂದ್ರ ಭೇಟಿ ಸಿದ್ದರಾಮಯ್ಯ ಮೇಲೆ ಒತ್ತಡ ಹಾಕುವ ತಂತ್ರವಿರಬಹುದು ಎಂದೇ ಲೆಕ್ಕಾಚಾರ ಹಾಕಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ