ಬೆಂಗಳೂರು: ಏಷ್ಯಾದ ಅತೀ ದೊಡ್ಡ ಏರ್ ಶೋ ಯಲಹಂಕದ ವಾಯು ನೆಲೆಯಲ್ಲಿ ನಡೆಯುತ್ತಿದ್ದು ಇದರ ಪರಿಣಾಮ ಈ ರಸ್ತೆಯಲ್ಲಿ ಸಂಚರಿಸುವವರು ಗಮನಿಸಿ.
ಬೆಂಗಳೂರು ಏರ್ ಶೋಗೆ ಸಾಕಷ್ಟು ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ. ಏರ್ ಶೋನಲ್ಲಿ ಪ್ರದರ್ಶನಕ್ಕಿಡಲಾಗಿರುವ ವಿಮಾನಗಳ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಡುತ್ತಿದ್ದಾರೆ. ಇದರ ನಡುವೆ ಇಂದು, ನಾಳೆ ಗಣ್ಯರು ಬರುತ್ತಿದ್ದಾರೆ.
ಈ ನಡುವೆ ಏರ್ ಶೋಗೆ ಸಾಕಷ್ಟು ಜನ ಬರುತ್ತಿರುವುದರಿಂದ ಯಲಹಂಕಕ್ಕೆ ಬರುವ ರಸ್ತೆಗಳೆಲ್ಲವೂ ವಾಹನಗಳಿಂದ ತುಂಬಿ ಹೋಗಿದೆ. ಪರಿಣಾಮ ಸುಮಾರು 4 ಕಿ.ಮೀ.ಗಳಷ್ಟು ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿದೆ. ಕಿ.ಮೀ.ಗಟ್ಟಲೇ ವಾಹನಗಳು ರಸ್ತೆಯಲ್ಲೇ ನಿಂತಿವೆ.
ಕೇವಲ ಏರ್ ಶೋ ಮಾತ್ರವಲ್ಲ, ಏರ್ ಪೋರ್ಟ್, ಕಚೇರಿ ಕೆಲಸಗಳಿಗಾಗಿ ಇದೇ ಮಾರ್ಗದಲ್ಲಿ ಓಡಾಡುವವರಿಗೆ ಈಗ ಎಂದಿನಂತೆ ಸುಗಮವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಯಲಹಂಕ ಸುತ್ತಮುತ್ತ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು ಪ್ರಯಾಣಿಕರು ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಈ ರಸ್ತೆಗಳಲ್ಲಿ ಸಂಚರಿಸುವುದು ಉತ್ತಮ. ಫೆಬ್ರವರಿ 13,14 ರಂದು ಸಾರ್ವನಿಕರಿಗೂ ಏರ್ ಶೋ ವೀಕ್ಷಣೆಗೆ ಅವಕಾಶವಿದ್ದು ಆ ದಿನಗಳಲ್ಲಿ ಮತ್ತಷ್ಟು ಸಂಚಾರ ದಟ್ಟಣೆಯಿರುವ ಸಾಧ್ಯತೆಯಿದೆ.