ಬೆಂಗಳೂರು: ಫೆಬ್ರವರಿಯಿಂದ ಬೆಂಗಳೂರಿನಲ್ಲಿ ರೂಂ ಸಿಕ್ತಿಲ್ಲ, ಕ್ಯಾಬ್ ಬ್ಯುಸಿ ಎಂಬ ಪರಿಸ್ಥಿತಿಯಾಗಿದೆ. ಇದಕ್ಕೆಲ್ಲಾ ಕಾರಣ ಬೆಂಗಳೂರು ಏರ್ ಶೋ.
ಬೆಂಗಳೂರು ಏರ್ ಶೋ ನಿಮಿತ್ತ ದೇಶ-ವಿದೇಶಗಳಿಂದ ರಾಜ್ಯ ರಾಜಧಾನಿಗೆ ಬಂದಿಳಿಯುತ್ತಿದ್ದಾರೆ. ಹೀಗಾಗಿ ವಿಶೇಷವಾಗಿ ಯಲಹಂಕ ವಾಯುನೆಲೆಯ ಸುತ್ತಮುತ್ತಲ ಹೋಟೆಲ್ ರೂಂಗಳು, ಕ್ಯಾಬ್ ಗಳು ಈಗಾಗಲೇ ಬುಕ್ ಆಗಿವೆ.
ಕಳೆದ ವಾರದಿಂದಲೇ ಹೋಟೆಲ್, ಲಾಡ್ಜ್ ಗಳು ಬುಕ್ ಆಗುತ್ತಿವೆ. ಸಾಮಾನ್ಯ ದರ್ಜೆಯ ಕೊಠಡಿಗಳಿಂದ ಹಿಡಿದು ಐಷಾರಾಮಿ ಕೊಠಡಿಗಳವರೆಗೆ ಎಲ್ಲವೂ ಬುಕ್ ಆಗುತ್ತಿವೆ. ಇದರಿಂದಾಗಿ ಹೋಟೆಲ್ ಉದ್ಯಮಿಗಳಿಗಂತೂ ಭರ್ಜರಿ ಲಾಭವಾಗಲಿದೆ.
ಆದರೆ ಬೇಡಿಕೆ ಹೆಚ್ಚಾಗಿರುವುದರಿಂದ ಬೆಲೆಯೂ ಹೆಚ್ಚಳವಾಗಲಿದೆ. ಹಲವು ಕಡೆ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಟ್ರಾವೆಲ್ಸ್ ಗಳಿಗೂ ಹೆಚ್ಚಿನ ಬೇಡಿಕೆ ಬಂದಿದೆ. ವಿವಿಧ ಮಾದರಿಯ ಕಾರುಗಳನ್ನು ಬೆಂಗಳೂರು ನಗರ ವೀಕ್ಷಣೆಗೆ ಬುಕ್ ಮಾಡಲಾಗಿದೆ.
ಫೆಬ್ರವರಿ 10 ರಿಂದ 14 ರವರೆಗೆ ಬೆಂಗಳೂರು ಏರ್ ಶೋ ನಡೆಯಲಿದೆ. ಹೀಗಾಗಿ ಈಗ ಏರ್ ಶೋ ನಡೆಯುವ ಹೆಬ್ಬಾಳ, ಯಲಹಂಕ ಸುತ್ತಮುತ್ತಲ ಪ್ರದೇಶ ಅತ್ಯಂತ ದುಬಾರಿಯಾಗಿ ಪರಿಣಮಿಸಿದೆ.