ಬೆಂಗಳೂರಿನಲ್ಲಿ ರಾತ್ರೋ ರಾತ್ರಿ ಗಲಭೆ: ಗಲಭೆಕೋರರ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ಪವರ್
ಬುಧವಾರ, 12 ಆಗಸ್ಟ್ 2020 (09:54 IST)
ಬೆಂಗಳೂರು: ನಿನ್ನೆ ರಾತ್ರಿ ಫೇಸ್ ಬುಕ್ ಪೋಸ್ಟ್ ಒಂದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿದ ನೂರಾರು ಜನರ ಗುಂಪು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ, ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೂ ದಾಳಿ ನಡೆಸಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲು ಪೊಲೀಸರಿಗೆ ಫುಲ್ ಪವರ್ ನೀಡಿದೆ.
ನಗರದ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ಪ್ರತಿಭಟನಾಕಾರರು ದಾಂಧಲೆ ಪ್ರದರ್ಶಿಸಿದ್ದಾರೆ. ಗಲಭೆ ನಿಯಂತ್ರಿಸಲು ಪೊಲೀಸರು ಗುಂಡಿನ ದಾಳಿ ನಡೆಸಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಸದ್ಯಕ್ಕೆ ಸ್ಥಳದಲ್ಲಿ ಸೆಕ್ಷನ್ 144 ವಿಧಿಸಲಾಗಿದೆ.
ಅಖಂಡ ಶ್ರೀನಿವಾಸಮೂರ್ತಿಯವರ ಸಂಬಂಧಿಕರೊಬ್ಬರು ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆಂದು ಆರೋಪಿಸಿ ನೂರಾರು ಜನರು ಕಾವಲ್ ಬೈರಸಂದ್ರ ಪೊಲೀಸ್ ಠಾಣೆ ಮತ್ತು ಶಾಸಕರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಪೊಲೀಸರು ಎಷ್ಟೇ ಸಮಾಧಾನಿಸಲು ಯತ್ನಿಸಿದರೂ ಕೇಳದೇ ಮೊದಲೇ ತಯಾರಾಗಿ ಬಂದಂತೆ ಹಿಂಸಾಚಾರಕ್ಕಿಳಿದಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಪೊಲೀಸರು ಗುಂಪು ಚದುರಿಸಲು ಗುಂಡಿನ ದಾಳಿ ನಡೆಸಬೇಕಾಯಿತು. ಕಲ್ಲು ತೂರಾಟದಲ್ಲಿ ಪೊಲೀಸರಿಗೂ ಗಾಯಗಳಾಗಿವೆ.