ಬೆಂಗಳೂರು: ಬೀದಿ ನಾಯಿಗಳಿಗೆ ಚಿಕನ್, ಎಗ್ ಬಿರಿಯಾನಿ ನೀಡಲು ಬಿಬಿಎಂಪಿ 3 ಕೋಟಿ ರೂ. ಟೆಂಡರ್ ಕರೆಯಲು ಮುಂದಾಗಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಬಿಬಿಎಂಪಿ ಸ್ಪಷ್ಟನೆ ನೀಡಿದ್ದು ಎಲ್ಲಾ ನಾಯಿಗಳಿಗೂ ಬಿರಿಯಾನಿ ಭಾಗ್ಯ ಇಲ್ಲ ಎಂದಿದೆ.
ಬೆಂಗಳೂರಿನ ಬೀದಿ ನಾಯಿಗಳಿಗೆ ಬಿರಿಯಾನಿ ನೀಡಲು ಬಿಬಿಎಂಪಿ ಮುಂದಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಗೆ ಕಾರಣವಾಗಿತ್ತು. ಬೀದಿ ನಾಯಿಗಳಿಗೆ ಆಹಾರ ನೀಡಲು ಕೋಟಿ ಖರ್ಚು ಮಾಡಬೇಕಾದ ಅಗತ್ಯವೇನಿದೆ, ಇದರಿಂದ ಜನರ ದುಡ್ಡು ಪೋಲು ಎಂದು ಸಾಕಷ್ಟು ಜನ ಟೀಕೆ ಮಾಡಿದ್ದರು.
ಇದರ ಬೆನ್ನಲ್ಲೇ ಈಗ ಬಿಬಿಎಂಪಿ ಸ್ಪಷ್ಟನೆ ನೀಡಿದೆ. ಬೆಂಗಳೂರಿನಲ್ಲಿ ಸುಮಾರು 2.70 ಲಕ್ಷ ಬೀದಿ ನಾಯಿಗಳಿವೆ. ಆ ಪೈಕಿ ಆಹಾರದ ಕೊರತೆಯಿಂದ ಸೊರಗಿರುವ ಸುಮಾರು 4,000 ಬೀದಿ ನಾಯಿಗಳಿಗಷ್ಟೇ ಆಹಾರ ನೀಡಲಿದ್ದೇವೆ. ಬೀದಿ ನಾಯಿ ಆಹಾರಕ್ಕೆ ಬಿರಿಯಾನಿ ಪದ ಬಳಸಿಲ್ಲ. ಅವುಗಳಿಗೆ ಕೋಳಿ ಮಾಂಸ, ಅಕ್ಕಿ, ತರಕಾರಿ ಬೇಯಿಸಿದ ಆಹಾರ ನೀಡಲಿದ್ದೇವೆ ಎಂದಿದೆ.
ಕೆಲವು ನಿರ್ದಿಷ್ಟ ವಾರ್ಡ್ ಗಳಲ್ಲಿ ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಆಹಾರ ನೀಡಲಿದ್ದೇವೆ. ಪ್ರತೀ ವಲಯದಲ್ಲಿ 100 ಆಹಾರ ಸ್ಥಳ ಗುರುತಿಸಿ ಅಲ್ಲಿ ಆಹಾರ ಹಾಕಲಾಗುತ್ತದೆ. ಪ್ರತೀ ನಾಯಿಗೆ ಆಹಾರ ಒದಗಿಸಲು ಒಂದು ದಿನಕ್ಕೆ 19 ರೂ. ವೆಚ್ಚ ತಗುಲಲಿದೆ ಎಂದು ಬಿಬಿಎಂಪಿ ಸ್ಪಷ್ಟನೆ ನೀಡಿದೆ.