ನಗರದಲ್ಲಿ ಒಟ್ಟು 40.57 ಕೋಟಿ ರೂ ಮೌಲ್ಯದ ಆಸ್ತಿ ಬಿಡಿಎ ವಶಕ್ಕೆ

ಗುರುವಾರ, 16 ಸೆಪ್ಟಂಬರ್ 2021 (21:13 IST)
ಬೆಂಗಳೂರು: ಭೂಕಬಳಿಕೆದಾರರ ವಿರುದ್ಧದ ಕಾರ್ಯಾಚರಣೆಯನ್ನು ಮುಂದುವರಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಗುರುವಾರ ಎರಡು ಸ್ಥಳಗಳಲ್ಲಿ ಒಟ್ಟು 40.57 ಕೋಟಿ ರೂಪಾಯಿ ಮೌಲ್ಯದ ತನ್ನ ಆಸ್ತಿಯನ್ನು ಮರುವಶಕ್ಕೆ ಪಡೆದುಕೊಂಡಿದೆ.
 
ಬೆಂಗಳೂರು ಉತ್ತರ ತಾಲೂಕಿನ ಯಶವಂತಪುರ ಹೋಬಳಿಯ ಉಲ್ಲಾಳು ಗ್ರಾಮದ ಸರ್ವೆ ಸಂಖ್ಯೆ 156/2 ರಲ್ಲಿನ 1 ಎಕರೆ 12 ಗುಂಟೆ ಮತ್ತು ಸರ್ವೆ ಸಂಖ್ಯೆ 156/3 ರಲ್ಲಿನ 1 ಎಕರೆ 28 ಗುಂಟೆ ಪ್ರದೇಶವನ್ನು ಬಿಡಿಎ ಬಡಾವಣೆ ನಿರ್ಮಾಣಕ್ಕೆಂದು ಸ್ವಾಧೀನ ಮಾಡಿಕೊಂಡಿತ್ತು. ಈ ಬಗ್ಗೆ ಭೂಮಾಲೀಕರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯವು ಬಿಡಿಎ ಪರವಾಗಿ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್ ಮತ್ತು ಕಾರ್ಯಕಾರಿ ಎಂಜಿನಿಯರ್ ಸುಷ್ಮಾ ನೇತೃತ್ವದಲ್ಲಿ ಬಿಡಿಎ ಅಧಿಕಾರಿಗಳು ಗುರುವಾರ ಜಾಗದಲ್ಲಿ ನಿರ್ಮಾಣವಾಗಿದ್ದ ತಾತ್ಕಾಲಿಕ ಶೆಡ್ ಗಳನ್ನು ತೆರವುಗೊಳಿಸಿ ಜಾಗವನ್ನು ಬಿಡಿಎ ವಶಕ್ಕೆ ಪಡೆದುಕೊಂಡರು. ಈ ಭೂಮಿಯ ಪ್ರಸ್ತುತ ಮಾರುಕಟ್ಟೆ ದರ 34.52 ಕೋಟಿ ರೂಪಾಯಿಗಳಾಗಿದೆ ಎಂದೂ ತಿಳಿಸಿದರು.
 
ಗುರುವಾರ ನೆಡೆದ ಮತ್ತೊಂದು ಕಾರ್ಯಾಚರಣೆ: 
 
ಮತ್ತೊಂದು ಕಾರ್ಯಾಚರಣೆಯಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಬಡಾವಣೆಯ 6 ನೇ ಬ್ಲಾಕ್ ನಲ್ಲಿ ನಿವೇಶನ ರಚನೆಗಾಗಿ ಭೂ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ, ಉಲ್ಲಾಳು ಗ್ರಾಮದ ಸರ್ವೆ ಸಂಖ್ಯೆ 202 ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದ್ದ 30x40 ಅಳತೆಯ 7 ನಿವೇಶನಗಳಲ್ಲಿ ಅಕ್ರಮವಾಗಿ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಾಣ ಮಾಡಲಾಗಿತ್ತು. ನ್ಯಾಯಾಲಯದ ಆದೇಶದಂತೆ ಈ ಶೆಡ್ ಗಳನ್ನು ತೆರವುಗೊಳಿಸಿದ ಅಧಿಕಾರಿಗಳು ಸ್ವತ್ತನ್ನು ಬಿಡಿಎ ವಶಕ್ಕೆ ಪಡೆದುಕೊಂಡರು. ಈ ನಿವೇಶನಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ 6.05 ಕೋಟಿ ರೂಪಾಯಿಗಳು ಎಂದೂ ಹೇಳಿದರು.
 
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್  ವಿವಿಧ ಬಡಾವಣೆಗಳಲ್ಲಿ ಬಿಡಿಎಗೆ ಅಪಾರ ಮೌಲ್ಯದ ಸೇರಿದ ಸ್ವತ್ತುಗಳು ಒತ್ತುವರಿಯಾಗಿವೆ. ಗಣೇಶ ಹಬ್ಬಕ್ಕೆ ಮುನ್ನ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಆರಂಭಿಸಿದ್ದೇವೆ. ಈ ಕಾರ್ಯಾಚರಣೆ ನಿರಂತರವಾಗಿ ನಡೆಯಲಿದ್ದು, ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅವರ ವಶದಲ್ಲಿರುವ ಬಿಡಿಎ ಆಸ್ತಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
 
ಈ ಕಾರ್ಯಾಚರಣೆಯಲ್ಲಿ ಡಿವೈಎಸ್ ಪಿ ಬಾಲಕೃಷ್ಣ, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಶ್ರೀನಿವಾಸ್ ಮತ್ತು ಲಕ್ಷ್ಮಯ್ಯ, ಎಂಜಿನಿಯರ್ ಪ್ರಕಾಶ್ ಇತರ  ಪಾಲ್ಗೊಂಡಿದ್ದರು.
frad

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ