ಕಾಶ್ಮೀರ ಗಡಿಯಲ್ಲಿ ಬೆಳಗಾವಿ ಯೋಧ ಹುತಾತ್ಮ: ಇಂದು ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ!

ಸೋಮವಾರ, 1 ಆಗಸ್ಟ್ 2016 (12:28 IST)
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ನಬಾಪೂರ ಗ್ರಾಮದ ಯೋಧ ಸುಭೇದಾರ ಬಸವರಾಜ ಚನ್ನಪ್ಪ ಪಾಟೀಲ್ ಅವರು ಜಮ್ಮು ಕಾಶ್ಮೀರ ಗಡಿ ಭಾಗದಲ್ಲಿ ಕರ್ತವ್ಯ ನಿರ್ವಹಿಸುವಾಗ ನೆಲಬಾಂಬ್ ಸ್ಫೋಟಗೊಂಡು ವೀರಮರಣ ಹೊಂದಿದ್ದಾರೆ.
 
ಗೋಕಾಕ್ ತಾಲೂಕಿನ ನಬಾಪೂರ ಗ್ರಾಮದವರಾದ ಬಸವರಾಜ ಚನ್ನಪ್ಪ ಪಾಟೀಲ್‌ ಅವರು ಪೌಢ ಹಾಗೂ ಪ್ರಾಥಮಿಕ ಶಿಕ್ಷಣವನ್ನು ಖನಗಾಂವ ಗ್ರಾಮದಲ್ಲಿ ಮುಗಿಸಿದ್ದು, ಭಾರತೀಯ ಮದ್ರಾಸ್ ರೆಜಿಮೆಂಟ್ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.  
 
ಶುಕ್ರವಾರ ಜಮ್ಮು ಕಾಶ್ಮೀರದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಮಯದಲ್ಲಿ ಆಕಸ್ಮಿಕ ನೆಲಬಾಂಬ್ ಸ್ಫೋಟಗೊಂಡು ವೀರ ಮರಣ ಹೊಂದಿದ್ದಾರೆ. ಮೃತ ಯೋಧನ ಪಾರ್ಥಿವ ಶರೀರ ಗೋವಾ ಮಾರ್ಗವಾಗಿ ಇಂದು ಬೆಳಗ್ಗೆ ಸ್ವಗ್ರಾಮ ನಬಾಪೂರಕ್ಕೆ ಬಂದು ತಲುಪಿದೆ.
 
ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಅವರ ಕುಟುಂಬ ವರ್ಗದವರು ಮಾಹಿತಿ ನೀಡಿದ್ದಾರೆ. ಮೃತರು ತಮ್ಮ ಪತ್ನಿ, ತಂದೆ ತಾಯಿ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ವೀರ ಯೋಧನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಊರಿನ ಜನರು ಕಾಯುತ್ತಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ