ಬೆಂಗಳೂರು: ವಯಸ್ಸಾಯ್ತು ಎಂದು ಬಿಎಸ್ ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿ ಇಳಿಸಿ ಕಳಿಸಿಕೊಟ್ರು. ಆದರೆ ಮೋದಿಜಿಗೆ ಮಾತ್ರ 75 ವರ್ಷ ಆದ್ರೂ ನೀವು ಇಳಿಯಿರಿ ಎಂದು ಯಾರು ಹೇಳೋರಿಲ್ಲ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ವ್ಯಂಗ್ಯ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಈ ದೇಶದಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರ ಇರಬಾರದು ಎಂದಿದ್ದಾರೆ. ಹೀಗಾಗಿ ಮೋದಿಜಿ ಸ್ವಯಂ ಪ್ರೇರಿತವಾಗಿ ತಮ್ಮ ಸ್ಥಾನ ಬಿಟ್ಟು ಹೋಗಬೇಕು. ನಿತಿನ್ ಗಡ್ಕರಿ ಮುಂದಿನ ಪ್ರಧಾನಿಯಾಗಬೇಕು ಎಂದಿದ್ದಾರೆ.
ನಿತಿನ್ ಗಡ್ಕರಿಯವರು ಒಬ್ಬ ಒಳ್ಳೆಯ ವ್ಯಕ್ತಿ. ಎಲ್ಲರೊಂದಿಗೆ ಬೆರೆಯುವ ಸಾಮಾನ್ಯ ವ್ಯಕ್ತಿ. ಮೊನ್ನೆ ಅವರೇ ಹೇಳಿದ್ದಾರಲ್ವಾ? ಈ ದೇಶದಲ್ಲಿ ಬಡವರು ಬಡವರಾಗಿಯೇ ಇದ್ದಾರೆ, ಶ್ರೀಮಂತರು ಶ್ರೀಮಂತರಾಗಿದ್ದಾರೆ ಎಂದು. ನಿಜವನ್ನೇ ಹೇಳಿದ್ದಾರೆ. ಅಂತಹ ವ್ಯಕ್ತಿ ದೇಶದ ಪ್ರಧಾನಿಯಾಗಬೇಕು ಎಂಬುದು ನಮ್ಮ ಆಸೆ ಎಂದರು.
ಈ ಹಿಂದೆ ಬಿಎಸ್ ವೈಗೆ 75 ವರ್ಷ ವಯಸ್ಸಾಯ್ತು ಎಂದು ಅವರನ್ನು ಬಿಟ್ಟೋಗಿ ಎಂದು ಕಣ್ಣೀರು ಹಾಕಿಸಿ ಇಳಿಸಿದ್ರು. ಈಗ ಮೋದಿಗೆ 75 ಆದಾಗ ಯಾರೂ ಮಾತಾಡಲ್ಲ ಯಾಕೆ? ಅವರೂ ಅಧಿಕಾರ ಬಿಟ್ಟು ಹೋಗ್ಲಿ. ಈ ಹಿಂದೆ ಯಡಿಯೂರಪ್ಪನವರಿಗೆ ಬಿಟ್ಟುಕೊಡಲು ಹೇಳಿದ್ದು ಇದೇ ಮೋದಿ ಅಲ್ವಾ? ಅವರಿಗೆ ಈ ನಿಯಮ ಅನ್ವಯವಾಗಲ್ವಾ ಎಂದು ಬೇಳೂರು ಗೋಪಾಲಕೃಷ್ಣ ವ್ಯಂಗ್ಯ ಮಾಡಿದ್ದಾರೆ.