ಮೋದಿ ಸರ್ಕಾರ ರೈತರ ಜೀವ ಹಿಂಡುತ್ತಿದೆ: ರಣದೀಪ್ ಸುರ್ಜೇವಾಲ

Krishnaveni K

ಮಂಗಳವಾರ, 8 ಜುಲೈ 2025 (17:50 IST)
ಬೆಂಗಳೂರು: ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕದ ರೈತರ ಜೀವ ಹಿಂಡುತ್ತಿದೆ, ರೈತರ ಮಾರುಕಟ್ಟೆಯನ್ನು ಹಾಳುಗೆಡವುತ್ತಿದೆ. ತೊಗರಿ ಬೇಳೆಯ ಆಮದು ನೀತಿಯಿಂದಾಗಿ ರಾಜ್ಯದ ತೊಗರಿ ಬೆಳೆಗಾರರು ವಾರ್ಷಿಕವಾಗಿ 1,550 ಸಾವಿರ ಕೋಟಿ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ವಾಗ್ದಾಳಿ ನಡೆಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದ ಪ್ರಹ್ಲಾದ್ ಜೋಶಿ, ಸೋಮಣ್ಣ ಏನು ಮಾಡುತ್ತಿದ್ದಾರೆ? ಸ್ವಯಂ ಘೋಷಿತ ರೈತನ ಮಗನಾದ ಕುಮಾರಸ್ವಾಮಿ ಕರ್ನಾಟಕದ ರೈತರ ಕತ್ತು ಹಿಸುಕುತ್ತಿದ್ದರು ಏನೂ ಮಾತನಾಡದೇ ಏಕೆ ಸುಮ್ಮನಿದ್ದಾರೆ’ ಎಂದು ಪ್ರಶ್ನೆ ಮಾಡಿದ್ದಾರೆ.

‘ಮೋಜಾಂಬಿಕ್, ಮಯನ್ಮಾರ್, ಕೆನಡಾ, ಆಸ್ಟ್ರೇಲಿಯಾ ದೇಶದ ರೈತರಿಗೆ ಬಿಜೆಪಿ ಸರ್ಕಾರ ಉತ್ತೇಜನ ನೀಡುತ್ತಿದೆ. ಮೇ 16.2021 ತೆರಿಗೆ ರಹಿತವಾಗಿ ತೊಗರಿಯನ್ನು ಆಮದು ಮಾಡಿಕೊಂಡಿದೆ. ಇಡೀ ಪ್ರಪಂಚದ ಯಾವುದೇ ದೇಶದಿಂದ ತೊಗರಿ ತೆಗೆದುಕೊಳ್ಳಬಹುದು ಎಂದು ನಿಯಮ ರೂಪಿಸಲಾಗಿದೆ. ಕಳೆದ ಐದು ವರ್ಷಗಳಿಂದ ಇದೇ ವಂಚನೆ ಎಸಗಲಾಗುತ್ತಿದೆ.

ಕಳೆದ ಜನವರಿ 20 ರಂದು ನೂತನ ಸುತ್ತೋಲೆಯನ್ನು ಹೊರಡಿಸಿದ್ದ ಕೇಂದ್ರ ಸರ್ಕಾರ 2026 ಮಾರ್ಚ್ 31 ರವರೆಗೆ ಆಮದು ಸುಂಕ ರಹಿತವಾಗಿ ಆಮದು ಮಾಡಿಕೊಳ್ಳಬಹುದು ಎಂದು ಹೇಳಿದೆ. ಹಾಗಾದರೆ ಬಿಜೆಪಿ ಸರ್ಕಾರಕ್ಕೆ ದೇಶದ, ಕರ್ನಾಟಕದ ರೈತರು ಬೇಡವೇ?’ ಎಂದಿದ್ದಾರೆ.

‘2022-23 ರಲ್ಲಿ ಮೋದಿ ಸರ್ಕಾರ 24.90 ಲಕ್ಷ ಕೋಟಿ ಆಹಾರ ಧಾನ್ಯಗಳನ್ನು ವಿದೇಶಗಳಿಂದ ಆಮದು ಮಾಡಿಕೊಂಡಿದೆ. 2023-24 ರಲ್ಲಿ 48 ಲಕ್ಷ ಕೋಟಿ, ಈ ವರ್ಷ 67 ಲಕ್ಷ ಕೋಟಿ ಧಾನ್ಯಗಳನ್ನ ಹೊರಗಿನಿಂದ ತರಿಸಿಕೊಂಡರೆ ದೇಶದ ರೈತರಿಗೆ ವಂಚನೆಯಲ್ಲವೇ? ಮೋದಿ ಸರ್ಕಾರ ತೊಗರಿ ಹಾಗೂ ಇತರೇ ಆಹಾರ ಧಾನ್ಯಗಳನ್ನು ಬೆಳೆದು ಪ್ರತಿವರ್ಷ ಭಾರತಕ್ಕೆ ನೀಡಿ ಎಂದು ಮೊಜಂಬಿಕ್ ದೇಶದ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. 2 ಲಕ್ಷ ಕೋಟಿ ಟನ್ ಈ ಆಮದಿನ ಮೌಲ್ಯ.

ಮಹಾರಾಷ್ಟ್ರ ಹಾಗೂ ಕರ್ನಾಟಕ ದೇಶದ ಶೇ50 ರಷ್ಟು ತೊಗರಿ ಉತ್ಪಾದನೆ ಮಾಡುತ್ತವೆ. ಬೀದರ್, ಕಲಬುರ್ಗಿ, ರಾಯಚೂರು ಸೇರಿದಂತೆ ಮಹಾರಾಷ್ಟ್ರದ ಲಾಥೂರ್ ವರೆಗೆ ತೊಗರಿ ಬೆಳೆಗಾರರು ಇದ್ದಾರೆ.

ಆಗಸ್ಟ್ 14, 2019 ರಲ್ಲಿ ಕಲಬುರ್ಗಿ ತೊಗರಿಗೆ ಜಿಐ ಟ್ಯಾಗ್ ಸಿಕ್ಕಿದೆ. ಕರ್ನಾಟದ ತೊಗರಿಗೆ ವಿಶ್ವಮಾನ್ಯತೆ ದೊರೆತಿದೆ. ಆದರೆ ಬಿಜೆಪಿ ರೈತರನ್ನು ಬೀದಿಗೆ ನೂಕಿದೆ. 2024- 25 ರಲ್ಲಿ ತೊಗರಿಗೆ ಇದ್ದ ಬೆಂಬಲ ಬೆಲೆ ಕ್ವಿಂಟಾಲ್ ಗೆ 7,550 ರೂಪಾಯಿ ಇತ್ತು. 2025-26 ರಲ್ಲಿ 8,000 ರೂಪಾಯಿ ಬೆಂಬಲ ಬೆಲೆಯನ್ನು ಕ್ವಿಂಟಾಲ್ ಗೆ ನಿಗಧಿ ಮಾಡಲಾಗಿದೆ. ಆದರೆ 2024-25 ರಲ್ಲಿ ಕರ್ನಾಟಕದ ರೈತರು 5,500-6000 ಕ್ಕೆ ಮಾರಾಟ ಮಾಡಿದ್ದಾರೆ. ಅಂದರೆ ಪ್ರತಿ ರೈತನಿಗೆ  1 ಸಾವಿರದಿಂದ 1,500 ರೂಪಾಯಿ ಹಣ ವಂಚನೆಯಾಗಿದೆ. ಈ ವರ್ಷದಲ್ಲಿ ಕರ್ನಾಟಕ ಸುಮಾರು 10 ಲಕ್ಷ ಕ್ವಿಂಟಾಲ್ ತೊಗರಿ ಬೆಳೆದಿತ್ತು. ಏನಿಲ್ಲ ಎಂದರು ನಮ್ಮ ರೈತರು 1,550 ಸಾವಿರ ಕೋಟಿ ಹಣ ಕಳೆದುಕೊಂಡಿದ್ದಾರೆ’ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

‘ಕರ್ನಾಟಕ ಸರ್ಕಾರ 11, 032 ಮೂಲಬೆಲೆಯೊಂದಿಗೆ 16,548 ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್ ತೊಗರಿಗೆ ಘೋಷಣೆ ಮಾಡಬೇಕು ಎಂದು ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಆಗ್ರಹ ಮಾಡಿದ್ದರು. ಆದರೂ ಕೇಂದ್ರ ಸರ್ಕಾರ ರೈತರಿಗೆ ದ್ರೋಹ ಎಸಗುತ್ತಿದೆ. ಉದ್ದೇಶಪೂರ್ವಕವಾಗಿಯೇ ಮೋದಿ ಸರ್ಕಾರ ತೊಗರಿ ಹಾಗೂ ಇತರೇ ಕಾಳುಗಳ ಬೆಳೆಗಾರರಿಗೆ ದ್ರೋಹ ಬಗೆಯುತ್ತಿದೆ. ಕೇಂದ್ರ ಕೃಷಿ ಮಂತ್ರಾಲಯ 2022-23 ವರೆಗೆ ಮಾತ್ರ ದಾಖಲೆಗಳನ್ನು ತನ್ನ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿದೆ.

ದೇಶದ ರೈತರು 276 ಲಕ್ಷ ಕೋಟಿ ಟನ್ ತೊಗರಿ ಹಾಗೂ ಬೇಳೆ ಕಾಳುಗಳ ಉತ್ಪಾದನೆ ಮಾಡಿದ್ದಾರೆ. ಕುಚೋದ್ಯವೆಂದರೆ ಮೋದಿ ಸರ್ಕಾರ ಖರೀದಿ ಮಾಡಿರುವುದು 1.20 ಲಕ್ಷ ಕೋಟಿ ಮಾತ್ರ. ಅಂದರೆ 274 ಲಕ್ಷ ಕೋಟಿ ಟನ್ ಬೆಳೆ ಎಂಎಸ್ ಪಿ ಒಳಗೆ ಬಂದೇ ಇಲ್ಲ. ಹೀಗಿದ್ಧಾಗ ಇದರ ಉಪಯೋಗವೇನು ಎಂಬುದನ್ನು ಮೋದಿ ಅವರು ತಿಳಿಸಬೇಕು. ಎಂಎಸ್ ಪಿ ಎನ್ನುವುದು ರೈತರಿಗೆ ಹಕ್ಕಿಯ ಹಿಕ್ಕೆಯಂತಾಗಿದೆ.

ಸಂಸದ ತೇಜಸ್ವಿ ಕರ್ನಾಟಕ ಸರ್ಕಾರ ದಿವಾಳಿಯಾಗಿದೆ ಎಂದು ಹೇಳಿರುವ ಬಗ್ಗೆ ಕೇಳಿದಾಗ, “ಮೊದಲು ಈತ ಅಮೆರಿಕಾದಲ್ಲಿ ಆದ ಅವಮಾನದ ಬಗ್ಗೆ ಉತ್ತರ ನೀಡಲಿ. ಇದು ಅವರಿಗೆ ಮಾತ್ರ ಆದ ಅವಮಾನವಲ್ಲ, ದೇಶಕ್ಕಾದ ಅಪಮಾನ. ಅಪಮಾನ ಅನುಭವಿಸಿದರೂ ಸುಮ್ಮನಿರುವ ಬಗ್ಗೆ ಕೇಳಿ” ಎಂದರು.

ರಾಜ್ಯ ಬೇಟಿ ನೀಡಿರುವ ಬಗ್ಗೆ ಕೇಳಿದಾಗ, “ಶಾಸಕರ ಕ್ಷೇತ್ರದ ಪ್ರಗತಿ ಸೇರಿದಂತೆ ಗ್ಯಾರಂಟಿ ಯೋಜನೆಗಳು ಹೇಗೆ ಜನರಿಗೆ ತಲುಪಿವೆ ಎಂದು ತಿಳಿದುಕೊಳ್ಳುವುದು. ಮುಂದಿನ ವಿಧಾನಸಭಾ ಚುನಾವಣೆ ಬಗ್ಗೆ ಸಂಘಟನೆ ವಿಚಾರ ಚರ್ಚೆ ನಡೆಸಲಾಗುತ್ತಿದೆ” ಎಂದು ಹೇಳಿದರು.

“ನಮ್ಮ ಶಾಸಕರು ಒಂದಷ್ಟು ಇರುಸು ಮುರುಸು ಅನುಭವಿಸುತ್ತಿದ್ದಾರೆ. ಇದನ್ನು ಬರವಣಿಗೆ ರೂಪದಲ್ಲಿ ನೀಡಿ ಎಂದು ಹೇಳಿದ್ದೇನೆ” ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ