ಬೆಂ-ಮೈ ಟೋಲ್ ದರ ಶೇ. 22 ಹೆಚ್ಚಳ
ಕಳೆದ ಒಂದು ತಿಂಗಳಿನಿಂದ ಹಲವು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್ ದರ ಹೆಚ್ಚಳ ಮಾಡಲಾಗಿದೆ. ಈಗಿರುವ ಟೋಲ್ ದರ ಹೆಚ್ಚಾಗಿದೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿರುವ ಮಧ್ಯೆಯೇ NHAI ಮತ್ತೆ ಶೇಕಡಾ 22ರಷ್ಟು ಟೋಲ್ ದರ ಹೆಚ್ಚಿಸಿದೆ. ನಾಳೆಯಿಂದ ಈಗಿರುವ ಟೋಲ್ಗಿಂತ ಶೇಕಡಾ 22ರಷ್ಟು ದರ ದುಬಾರಿಯಾಗಲಿದೆ. ಟೋಲ್ ಸಂಗ್ರಹ ಆರಂಭವಾದ 17 ದಿನದಲ್ಲೇ ಮತ್ತೆ ಟೋಲ್ ದರ ಹೆಚ್ಚಳ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ. ಮಾರ್ಚ್ 14ರಿಂದ ಟೋಲ್ ಸಂಗ್ರಹ ಆರಂಭವಾಗಿತ್ತು. ಇದೀಗ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ರ ಪ್ರಕಾರ ದರ ಹೆಚ್ಚಳ ಮಾಡಲಾಗಿದ್ದು, ಬಿಡದಿ, ರಾಮನಗರ ವಾಹನ ಸವಾರರು ಸರ್ವಿಸ್ ರಸ್ತೆ ಬಳಸುವಂತೆ ಮನವಿ ಮಾಡಿದೆ. ಟೋಲ್ ದರ ಹೆಚ್ಚಳಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದು, ಹೆದ್ದಾರಿ ಪ್ರಾಧಿಕಾರ ಜನಸಾಮಾನ್ಯರ ಲೂಟಿ ಮಾಡುತ್ತಿದೆ ಎಂದು ಕಿಡಿಕಾರುತ್ತಿದ್ದಾರೆ. ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಹೈವೇ ಅಥಾರಿಟಿ ಪ್ರತೀ ವರ್ಷ ಟೋಲ್ ದರ ಹೆಚ್ಚಿಸೋದು ಸಾಮಾನ್ಯ, ದೇಶದ ಎಲ್ಲ ಟೋಲ್ ದರಗಳಲ್ಲೂ ಹೆಚ್ಚಳ ಆಗಿದೆ. ಈ ಹೆದ್ದಾರಿಗೆ ಟೋಲ್ ದರ ಹೆಚ್ಚಳ ನಿರ್ಧಾರ ಪರಾಮರ್ಶೆ ಮಾಡಬೇಕು. ಟೋಲ್ ದರ ಯಥಾಸ್ಥಿತಿ ಮುಂದುವರೆಸುವಂತೆ ಮನವಿ ಮಾಡಿದ್ದೀನಿ ಎಂದು ತಿಳಿಸಿದ್ರು.