ನದಿ ನೀರು ಬಳಕೆ ಮಾಡುವ ರಾಜ್ಯಗಳ ಪ್ರಮುಖ ಪಟ್ಟಣಗಳಾದ ಬೆಂಗಳೂರು, ಹೈದ್ರಾಬಾದ್, ಚೆನ್ನೈ, ಕೊಚ್ಚಿ ನದಿ ನೀರನ್ನ ವಿಜ್ಞಾನಿಗಳು ಪರೀಕ್ಷಿಸಿ ಅಧ್ಯಯನ ವರದಿ ನೀಡಿದ್ದಾರೆ.
ಇಲ್ಲಿನ ನೀರಿನಲ್ಲಿ ಆರ್ಸೆನಿಕ್ ಅಂಶ ಇರುವಿಕೆ ಪತ್ತೆಗಾಗಿ ರಾಜ್ಯದ ಮಣಿಪಾಲ್ ವಿವಿ, ಮದ್ರಾಸ್ ವಿವಿ ಹಾಗೂ ರಾಷ್ಟ್ರೀಯ ಕೃಷಿ ಹಾಗೂ ಆಹಾರ ಇಲಾಖೆ ಜಂಟಿ ಸಹಭಾಗಿತ್ವದಲ್ಲಿ ಸಂಶೋಧನೆ ನಡೆಸಿ, ರಾಜಧಾನಿಯಲ್ಲಿ ಬಳಸುತ್ತಿರುವ ನೀರಿನಲ್ಲಿ ಆರ್ಸೆನಿಕ್ ಅಂಶ ಇರುವ ಬಗ್ಗೆ ಮಾಹಿತಿ ನೀಡಿದೆ.
ಕೈಗಾರಿಕೆಯ ತ್ಯಾಜ್ಯ ನೀರೇ ಕಾರಣ.!
ನದಿಗಳ ಪಕ್ಕದಲ್ಲೆ ಇರುವ ಕೈಗಾರಿಕೆಗಳಿಂದ ತ್ಯಾಜ್ಯ ನೀರನ್ನ ನದಿಗೆ ಹರಿಸುತ್ತಿರುವುದರಿಂದ ಕೈಗಾರಿಕೆಗಳಲ್ಲಿನ ವಿಷಕಾರಿ ಲವಣಗಳು ನೀರಿನಲ್ಲಿ ಮಿಶ್ರಣವಾಗಿ ಜನತೆಯ ಹೊಟ್ಟೆ ಸೇರುತ್ತಿದೆ. ಆರ್ಸೆನಿಕ್ ಜೊತೆಗೆ ಪಾದರಸ, ಸೀಸ, ಕಾಡ್ಮಿಯಂ ಅನ್ನೋ ವಿಷಕಾರಿ ಲವಣಗಳು ನದಿಗೆ ಸೇರುತ್ತಿವೆ. ಇದರಿಂದ ನದಿಯಲ್ಲಿನ ಜೀವ ಸಂಕುಲ ಕೂಡಾ ನಶಿಸುತ್ತಿದೆ. ದಕ್ಷಿಣ ಭಾರತದಲ್ಲಿ ಪ್ರಮುಖ ಕೈಗಾರಿಕೋದ್ಯಮಗಳು ನೆಲೆಗೊಂಡಿರುವುದೇ ಬೆಂಗಳೂರು ಚೆನ್ನೈ, ಹೈದ್ರಾಬಾದ್, ಕೊಚ್ಚಿನ್ ಗಳಲ್ಲಿ. ಅದರಲ್ಲೂ ಇವುಗಳ ತ್ಯಾಜ್ಯ ವಿಲೇವಾರಿಯಾಗುವುದು ನದಿಗಳೇ ಅನ್ನುವುದು ದುರಂತ.!
ನದಿಮೂಲ ಶುದ್ಧಿ ಬಗ್ಗೆ ಕೇರ್ ಇಲ್ಲ!
ವಿಪರ್ಯಾಸವೆಂದರೆ ನದಿಮೂಲಗಳ ಬಗ್ಗೆ ಆಡಳಿತಕ್ಕಾಗಲಿ, ಸರಕಾರಕ್ಕಾಗಲಿ ಜವಾಬ್ದಾರಿ ಇಲ್ಲ. ಇದರಿಂದ ನದಿ ಮೂಲಗಳು ಹಾಳಾಗುತ್ತಿವೆ ಎಂದು ಸಂಶೋಧನಾ ತಂಡ ಕಳವಳ ವ್ಯಕ್ತಪಡಿಸಿದೆ. ನಾಲ್ಕು ರಾಜ್ಯಗಳಲ್ಲಿ ಸಂಶೋಧನೆ ನಡೆಸಿದ ತಂಡ ನೀರಿನ ಮೂಲಗಳಾದ ಕೆರೆ, ಕೆನಾಲ್, ಮುಖ್ಯ ನದಿಗಳ 48 ಕಡೆ ನೀರನ್ನು ಪರೀಕ್ಷಿಸಿ 27 ನೀರಿನ ಸ್ಯಾಂಪಲ್ ಪಡೆದುಕೊಳ್ಳಲಾಗಿತ್ತು. ಅದರಲ್ಲೂ ಕಾವೇರಿ ನದಿ ಪಾತ್ರದಲ್ಲಿ ನೀರಿನಲ್ಲಿ ಮ್ಯಾಂಗನೀಸ್, ಐರನ್, ಕಾಪರ್, ಕಾಡ್ಮಿಯಮ್ ಅಂಶ ಹೆಚ್ಚಾಗಿರುವುದು ಕಂಡು ಬಂದಿದೆ. ಇಲ್ಲಿನ ಸ್ಯಾಂಪಲ್ಗಳ ಬಗ್ಗೆ ವಿಶ್ವ ಆರೋಗ್ಯ ಸಂಘಟನೆ ಗಮನಕ್ಕೂ ತರಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಜೊತೆಗೆ ಈ ಬಗ್ಗೆ ಶೀಘ್ರ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.