ಬೆಂಗಳೂರು ಮಳೆ ಅಬ್ಬರ: ರಿಯಲ್ ಬೆಂಗಳೂರು ವಾಪಸ್ ಬಂತು ಎಂದು ಖುಷಿಯಾದ ಜನ

Krishnaveni K

ಗುರುವಾರ, 9 ಮೇ 2024 (09:37 IST)
ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ನಿರಂತರ ಮಳೆಯಾಗುತ್ತಿದೆ. ನಿನ್ನೆ ರಾತ್ರಿಯೂ ಧಾರಾಕಾರವಾಗಿ ಮಳೆಯಾಗಿದೆ. ಇದು ಜನರಿಗೆ ಖುಷಿ ತಂದಿದೆ.

ಸತತ ಬಿಸಿಲು, ದಾಖಲೆಯ ತಾಪಮಾನ, ನೀರಿಲ್ಲದೇ ಸಂಕಷ್ಟ ಕಾಲದಲ್ಲಿದ್ದಾಗ ಮಳೆ ಬಂದು ಜನರ ಮನಸ್ಸಿಗೂ ತಂಪೆರಚಿದ್ದಾನೆ. ನಿನ್ನೆ ರಾತ್ರಿಯೂ ಬೆಂಗಳೂರಿನ ಬಹುತೇಕ ಕಡೆ ಮಳೆಯಾಗಿದೆ. ಬೆಳಿಗ್ಗೆಯೇ ಜಿಟಿಗುಟ್ಟುವ ಮಳೆಯಾಗುತ್ತಿದ್ದರಿಂದ ಬೆಂಗಳೂರು ವಾತಾವರಣವೇ ಬದಲಾಗಿದೆ.

ಕಳೆದ ವಾರ ಬೆಂಗಳೂರು ತಾಪಮಾನ 40 ಡಿಗ್ರಿವರೆಗೆ ಏರಿಕೆಯಾಗಿತ್ತು. ಆದರೆ ಈಗ ಮಳೆಯಾಗುತ್ತಿರುವುದರಿಂದ ಕನಿಷ್ಠ ತಾಪಮಾನ 22 ಡಿಗ್ರಿವರೆಗೂ ಇಳಿಕೆಯಾಗಿದೆ. ಜಿಟಿಗುಟ್ಟುವ ಮಳೆ, ಮೋಡ ಕವಿದ ವಾತಾವರಣ ಜೊತೆಗೆ ಕೂಲ್ ಕೂಲ್ ಗಾಳಿ ನೋಡಿ ಅಂತೂ ರಿಯಲ್ ಬೆಂಗಳೂರು ವಾಪಸ್ ಬಂತು ಎಂದು ಜನ ಖುಷಿಯಿಂದ ಸೋಷಿಯಲ್ ಮೀಡಿಯಾಗಳಲ್ಲಿ  ಫೋಟೋ, ವಿಡಿಯೋ ಹಂಚಿ ಖುಷಿಪಡುತ್ತಿದ್ದಾರೆ.

ಕಳೆದ ವಾರವಷ್ಟೇ ಸುಡು ಬಿಸಿಲಿನಿಂದ ಇದು ಬಳ್ಳಾರಿ, ರಾಯಚೂರೇನೋ ಎಂಬಷ್ಟು ಅನುಮಾನ ಬರುವಂತಿದ್ದ ಬೆಂಗಳೂರಿನ ವಾತಾವರಣ ಈಗ ಹದಕ್ಕೆ ಬಂದಿದೆ. ಇನ್ನೂ ನಾಲ್ಕೈದು ದಿನಗಳ ಕಾಲ ನಿರಂತರ ಮಳೆಯಾದರೆ ನಗರದ ನೀರಿನ ಸಮಸ್ಯೆಗೆ ಕೊಂಚ ಪರಿಹಾರ ಸಿಗುವ ಸಾಧ‍್ಯತೆಯಿದೆ. ಸದ್ಯದ ಹವಾಮಾನ ಮುನ್ಸೂಚನೆ ಪ್ರಕಾರ ಶುಕ್ರವಾರದವರೆಗೂ ಮಳೆಯಾಗಲಿದ್ದು, ವೀಕೆಂಡ್ ನಲ್ಲಿ ಮಳೆರಾಯ ಕೊಂಚ ಬ್ರೇಕ್ ತೆಗೆದುಕೊಳ್ಳಲಿದ್ದಾನೆ. ಆದರೆ ಮುಂದಿನ ಸೋಮಾವರದಿಂದ ಮತ್ತೆ ನಾಲ್ಕು ದಿನಗಳವರೆಗೆ ಮಳೆಯಾಗುವ ಸೂಚನೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ