ಬೆಂಗಳೂರು: ವಿಲ್ಸನ್ ಗಾರ್ಡನ್ ನ ಚಿನ್ನಯ್ಯನಪಾಳ್ಯದಲ್ಲಿ ಇತ್ತೀಚೆಗೆ ನಡೆದ ನಿಗೂಢ ಸ್ಪೋಟಕ್ಕೆ ಕೊನೆಗೂ ಕಾರಣ ಬಯಲಾಗಿದೆ. ಘಟನೆಯಲ್ಲಿ ಓರ್ವ ಬಾಲಕ ಮೃತಪಟ್ಟು ಹಲವರು ಗಾಯಗೊಂಡಿದ್ದರು.
ಸ್ವಾತಂತ್ರ್ಯ ದಿನಾಚರಣೆಯಂದು ವಿಲ್ಸನ್ ಗಾರ್ಡನ್ ನ ಮನೆಯೊಂದರಲ್ಲಿ ಸ್ಪೋಟ ಸಂಭವಿಸಿತ್ತು. ಘಟನೆಯಲ್ಲಿ ಓರ್ವ ಬಾಲಕ ಸ್ಥಳದಲ್ಲಿಯೇ ಮೃತಪಟ್ಟರೆ ಇಬ್ಬರು ನಂತರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಇನ್ನು ಕೆಲವರು ಗಾಯಗೊಂಡಿದ್ದರು.
ಸ್ವಾತಂತ್ರ್ಯ ದಿನದಂದೇ ಸ್ಪೋಟ ಸಂಭವಿಸಿದ್ದರಿಂದ ಇದರ ಹಿಂದೆ ದುಷ್ಕರ್ಮಿಗಳ ಕೈವಾಡವಿದೆಯೇ ಎಂದು ಪೊಲೀಸರು ತನಿಖೆ ನಡೆಸಿದ್ದರು. ಇದೀಗ ಘಟನೆಗೆ ನಿಖರ ಕಾರಣ ಬಯಲಾಗಿದೆ. ರಾತ್ರಿಯಿಡೀ ಅಡುಗೆ ಅನಿಲ ಸೋರಿಕೆಯಾಗಿತ್ತು. ಬೆಳಗ್ಗೆ ಮಗು ಟಿವಿ ಆನ್ ಮಾಡಿದಾಗ ಸ್ಪೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಕಸ್ತೂರಮ್ಮ ಎಂಬವರ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿತ್ತು. ಸ್ಪೋಟಕ್ಕೆ ಮನೆಯ ಛಾವಣಿಗಳೇ ಛಿದ್ರವಾಗಿತ್ತು. 8 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿತ್ತು. ಹಾನಿಗೀಡಾದ ಮನೆಗಳನ್ನು ಸರ್ಕಾರವೇ ದುರಸ್ಥಿ ಮಾಡಿಕೊಡಲಿದೆ.