ಭಾರತ ಜೋಡೋ ಯಾತ್ರೆಯಲ್ಲ,ಭಾರತ ಬಿಟ್ಟು ಓಡೋ ಯಾತ್ರೆ'- ನಳಿನ್ ಕುಮಾರ್ ಕಟೀಲ್ ವ್ಯಂಗ್ಯ

ಬುಧವಾರ, 5 ಅಕ್ಟೋಬರ್ 2022 (16:31 IST)
ಕಾಂಗ್ರೆಸ್ ಪಕ್ಷದ್ದು ಭಾರತ ಜೋಡೋ ಯಾತ್ರೆಯಲ್ಲ; ಅದು 'ಭಾರತ ಬಿಟ್ಟು ಓಡೋ ಯಾತ್ರೆ'ಯಾಗಿ ಪರಿವರ್ತನೆ ಹೊಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
 
ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ತೊರೆದು ಹೊಸ ಪಕ್ಷ ಸ್ಥಾಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕತ್ವದ ವಿರುದ್ಧ ಕೋಪದಿಂದಿರುವ ನಾಯಕರು ಜೊತೆಗೂಡಿ ಜಿ-23 ಗುಂಪು ರಚಿಸಿದ್ದರು. ಕಾಂಗ್ರೆಸ್ ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ಇಲ್ಲ; ಅದು ಚೇತರಿಕೆ ಕಾಣಲಾರದು ಎಂಬುದನ್ನು ಮನಗಂಡ ನಾಯಕರನೇಕರು ಒಬ್ಬೊಬ್ಬರಾಗಿ ಈಗಾಗಲೇ ಆ ಪಕ್ಷಕ್ಕೆ ವಿದಾಯ ಹೇಳಿದ್ದಾರೆ. ಸ್ವಜನಪಕ್ಷಪಾತ, ಕುಟುಂಬ ರಾಜಕಾರಣದ ಮೂಲಕ ಗುರುತಿಸಿಕೊಂಡ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಪಕ್ಷದೊಳಗಿನ ಭಿನ್ನಮತ ಹಾಗೂ ಸಮರ್ಥ ನಾಯಕತ್ವದ ಕೊರತೆಯಿಂದ ನೆಲಕಚ್ಚಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
 
ಕಾಂಗ್ರೆಸ್ ತೊರೆಯುವ ನಾಯಕರನ್ನು ಒಂದೆಡೆ ಸೇರಿಸಿ ಕಾಂಗ್ರೆಸ್ ಜೋಡೋ ಮಾಡಬೇಕಿದ್ದ ರಾಹುಲ್ ಗಾಂಧಿಯವರು ತಮ್ಮ ಮುತ್ತಾತ ನೆಹರೂ ಅವರು ದೇಶವನ್ನು ಇಬ್ಭಾಗ ಮಾಡಿದ್ದನ್ನು ಮರೆತಿದ್ದಾರೆ. ಇದು ಜಾಣಮರೆವಲ್ಲದೆ ಮತ್ತೇನಲ್ಲ. ಆದರೆ, 130 ಕೋಟಿ ಜನರ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿ ಅವರು ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದು ಮಾಡಿ ದೇಶ ಜೋಡಿಸುವ ಕಾರ್ಯ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ