ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ರಾಷ್ಟ್ರೀಯ ಪಕ್ಷ ಬಿಜೆಪಿಯ ಕಚೇರಿಗೆ ಭದ್ರತೆ ಒದಗಿಸಿಕೊಡುವುದರಲ್ಲಿ ಹಿಂದೆ ಮುಂದೆ ನೋಡುತ್ತಿದೆ. ಇದು ಬೇಹುಗಾರಿಕೆಯ ಅತ್ಯಂತ ದೊಡ್ಡ ವೈಫಲ್ಯ ಎಂದು ಬಿಜೆಪಿ ಮುಖಂಡ ಭಾಸ್ಕರ್ ರಾವ್ ಅವರು ಆಕ್ಷೇಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯ ಕಚೇರಿಯನ್ನು ಭಯೋತ್ಪಾದಕರು ಗುರಿಯಾಗಿ ಇಟ್ಟುಕೊಂಡಿದ್ದರು. ಕಾರಣಾಂತರದಿಂದ ರಾಮೇಶ್ವರಂ ಕೆಫೆಗೆ ಹೋಗಿ ಬಾಂಬ್ ಸ್ಫೋಟ ನಡೆಸಿದ್ದು ಎನ್‍ಐಎ ತನಿಖೆ ವೇಳೆ ಗೊತ್ತಾಗಿದೆ ಎಂದು ವಿವರಿಸಿದರು. ಇದೇ ವಿಚಾರವನ್ನು ಅದು ಕೋರ್ಟಿಗೆ ತಿಳಿಸಿದೆ ಎಂದು ತಿಳಿಸಿದರು. ಬೇಹುಗಾರಿಕೆ ವಿಫಲತೆಗೆ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರೇ ಹೊಣೆಗಾರರು ಎಂದು ಟೀಕಿಸಿದರು.
ರಾಜ್ಯದ ಗೃಹ ಸಚಿವರು ಸಂಪೂರ್ಣ ಅಸಮರ್ಥರಾಗಿದ್ದಾರೆ. ಅವರು ರಾಜೀನಾಮೆ ಕೊಡಬೇಕು ಅಥವಾ ಮುಖ್ಯಮಂತ್ರಿಗಳು ಅವರನ್ನು ವಜಾ ಮಾಡಬೇಕೆಂದು ಇದೇವೇಳೆ ಅವರು ಆಗ್ರಹಿಸಿದರು.
ಬೆಂಗಳೂರು ನಗರ ಬೇಹುಗಾರಿಕಾ ದಳ, ನಗರ ಭಯೋತ್ಪಾದನಾ ನಿಗ್ರಹ ದಳ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರಚಿಸಿದ ಆಂತರಿಕ ಭದ್ರತಾ ಇಲಾಖೆಗಳು ವಿಫಲವಾಗಿವೆ. ಈ ಸರಕಾರ ಅಧಿಕಾರಕ್ಕೆ ಬಂದು 16 ತಿಂಗಳಾದರೂ ಒಂದೇ ಒಂದು ಸಾರಿ ಈ ವಿಭಾಗಗಳ ಅವಶ್ಯಕತೆಗಳನ್ನು ಈಡೇರಿಸಿಲ್ಲ. ಇದೇ ಕಾರಣಕ್ಕೆ ಎನ್‍ಐಎ, ಕರ್ನಾಟಕದಲ್ಲಿ ಮಾಹಿತಿ ಸಂಗ್ರಹ ಮಾಡುವುದಲ್ಲದೆ, ದಾಳಿ, ಬಂಧನ, ತನಿಖೆ, ದೋಷಾರೋಪ ಪಟ್ಟಿ ಸಲ್ಲಿಕೆ ಮಾಡುತ್ತಿದೆ ಎಂದರು.
ಹಿಂದೆ ಜಗದೀಶ ಶೆಟ್ಟರ್ ಅವರ ನೇತೃತ್ವದ ಬಿಜೆಪಿ ಸರಕಾರ ಇರುವಾಗ ಭಯೋತ್ಪಾದನೆ ಚಟುವಟಿಕೆ ಪತ್ತೆಗೆ ಪ್ರತ್ಯೇಕ ವಿಭಾಗ ರೂಪಿಸಿದ್ದರು. ಆದರೆ, ವಸೂಲಿ ವಿಚಾರ ಹೊರಬರುವ ಭಯದಿಂದ ಈಗಿನ ಸರಕಾರವು ಆ ವಿಭಾಗ ಸಮರ್ಪಕವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಭ್ರಷ್ಟಾಚಾರ, ಹಣದ ಪ್ರಭಾವದಿಂದ ಪೊಲೀಸ್ ಇಲಾಖೆಯು ಸರಿಯಾಗಿ ಕೆಲಸ ಮಾಡದಂತಾಗಿದೆ. ಇಲಾಖೆ ನಿಷ್ಕ್ರಿಯವಾಗಿದ್ದು, ರಾಜ್ಯದ ಜನರ ಸುರಕ್ಷತೆ ಜೊತೆ ಆಟವಾಡುವ ಸ್ಥಿತಿ ಬಂದಿದೆ ಎಂದು ಟೀಕಿಸಿದರು.
ಬೆಂಗಳೂರು, ದೇಶ ಮಾತ್ರವಲ್ಲದೆ ವಿಶ್ವದ ಅತಿದೊಡ್ಡ ಹಣಕಾಸು ಕೇಂದ್ರವೆನಿಸಿದೆ. ಈ ನಗರಕ್ಕೆ ಸಿಗಬೇಕಾದಷ್ಟು ರಕ್ಷಣೆ ಸಿಗುತ್ತಿಲ್ಲ. ಕಡಿಮೆ ಸಂಖ್ಯೆಯ ಪೊಲೀಸ್ ವ್ಯವಸ್ಥೆಯಿಂದ ತನಿಖೆ ಕಾರ್ಯ ನಡೆದಿದೆ. ಸರಕಾರವು ತಾನು ಕಾನೂನು ಮತ್ತು ಸುವ್ಯವಸ್ಥೆಗೆ ಬೇಕಾದ ಮೂಲಸೌಕರ್ಯ ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. 16 ತಿಂಗಳಿನಲ್ಲಿ ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಗೆ ಒಬ್ಬ ಎಸ್‍ಐ, ಒಬ್ಬ ಕಾನ್‍ಸ್ಟೆಬಲ್ ಕೂಡ ಸೇರಿಸಿಲ್ಲ; ಮೂಲಸೌಕರ್ಯ ಕೊಟ್ಟಿಲ್ಲ ಎಂದು ದೂರಿದರು.
ಮಹಿಳಾ ಸುರಕ್ಷತೆಯತ್ತ ಗಮನ ಕೊಡುತ್ತಿಲ್ಲ. ಕೇಂದ್ರ ಸರಕಾರ ನೀಡುವ ನಿರ್ಭಯಾ ನಿಧಿಯನ್ನೂ ಬಳಸಿಲ್ಲ ಎಂದರು. ಭಯೋತ್ಪಾದನೆ, ಮಾದಕವಸ್ತು ನಿಯಂತ್ರಣದಲ್ಲಿ ಈ ಸರಕಾರ ಸಂಪೂರ್ಣ ವಿಫಲವಾಗಿದೆ. ಗೃಹ ಸಚಿವರು ಹೆಚ್ಚು ಸಕ್ರಿಯರಾಗಬೇಕಿತ್ತು. ಮಾದಕವಸ್ತು ಮಾರಾಟ, ಸಾಗಾಟ ಸಂಬಂಧ ಸಣ್ಣಪುಟ್ಟ ಮಾರಾಟಗಾರರನ್ನು ಗುರಿ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಕೋಟ್ಯಂತರ ರೂಪಾಯಿ ಕೊಟ್ಟು ಸಿಸಿಬಿಗೆ ಯಾಕೆ ಹೋಗುತ್ತಾರೆ? ಎಂದು ಕೇಳಿದ ಅವರು, ಸಿಸಿಬಿಯನ್ನು ಬಂದ್ ಮಾಡಿದರೆ, ಬೆಂಗಳೂರು ನಗರದ ಒಳಗೆ ಅಪರಾಧ ಕಡಿಮೆ ಆಗಬಹುದೆಂದು ನಾವು ಆಂತರಿಕವಾಗಿ ಮಾತನಾಡಿದ್ದಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.