ಹೊಸಪೇಟೆ: ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್‌ಗೇಟ್ ಮುರಿದು ಕೊಚ್ಚಿಹೋಗಲು ಕಾರಣ ತಿಳಿಯಲು ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ಮಾಜಿ ಅಧ್ಯಕ್ಷ ಎ.ಕೆ.ಬಜಾಜ್ ನೇತೃತ್ವದ ತಾಂತ್ರಿಕ ತಜ್ಞರ ತನಿಖಾ ತಂಡ ಸೋಮವಾರ ಅಣೆಕಟ್ಟೆಗೆ ಬಂದು ವೀಕ್ಷಣೆ ನಡೆಸಿದೆ.
ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಲಿಂಕ್ ಮುರಿದು ಕೊಚ್ಚಿಹೋದ ಪರಿಣಾಮ ಅಪಾರ ಪ್ರಮಾಣದ ನೀರು ನದಿಗೆ ಹರಿಸಲಾಯಿತು. ಈಗಾಗಲೇ ತಾತ್ಕಲಿಕ ಗೇಟ್ ಅನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.
ಇದೀಗ ಸ್ಥಳಕ್ಕೆ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ತಂಡದಲ್ಲಿ ಸುಮಾರು ಆರು ಮಂದಿ ಇದ್ದರು. ಕ್ರಸ್ಟ್‌ಗೇಟ್‌ಗಳ ಸಾಮರ್ಥ್ಯದ ಸಹಿತ ಹಲವು ಆಯಾಮಗಳಲ್ಲಿ ಪರಿಶೀಲನೆ ನಡೆಸಿದರು ಎಂದು ತುಂಗಭದ್ರಾ ಅಣೆಕಟ್ಟೆಯ ಮೂಲಗಳು ತಿಳಿಸಿವೆ.
ವೀಕ್ಷಣೆ ವೇಳೆ ಚೈನ್ ಲಿಂಕ್‌ನ ಬಲದೊಂದಿಗೆ ಲಂಬವಾಗಿ ನಿಂತಿದ್ದ ಕ್ರಸ್ಟ್‌ಗೇಟ್ ಕಳಚಿಕೊಳ್ಳಲು ನಿಜವಾಗಿ ಕಾರಣವೇನು, ಮಳೆಗಾಲಕ್ಕೆ ಮೊದಲು ಮತ್ತು ನಂತರ ಗೇಟ್ ಮತ್ತು ಚೈನ್‌ಲಿಂಕ್‌ಗಳನ್ನು ಆಗಾಗ್ಗೆ ಪರೀಕ್ಷಿಸಲಾಗುತ್ತಿತ್ತೇ, ಕ್ರಸ್ಟ್‌ಗೇಟ್‌ಗಳ ಆಯಸ್ಸು, ಕೊನೆಯ ಬಾರಿಗೆ ಮಾಡಿದ ದುರಸ್ತಿ ಮೊದಲಾದ ಅಂಶಗಳನ್ನು ತಂಡ ಕೂಲಂಕಷವಾಗಿ ಪರಿಶೀಲಿಸಲಿದ್ದು, ಮುಂದೆ ಇಂತಹ ದುರಂತ ಸಂಭವಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶಿಫಾರಸು ಮಾಡಲಿದೆ ಎಂದು ಹೇಳಲಾಗಿದೆ.
ಈ ತಂಡಕ್ಕೆ ವರದಿ ಸಲ್ಲಿಸಲು 15 ದಿನಗಳ ಗಡುವು ನೀಡಲಾಗಿದ್ದು, ಶೀಘ್ರದಲ್ಲೇ ಈ ಸಂಬಂಧ ವರದಿ ಹೊರಬೀಳಲಿದೆ.