ಭಟ್ಕಳ: ವಿಚಾರಣೆಗೆಂದು ಠಾಣೆಗೆ ಕರೆಸಿ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಭಟ್ಕಳ ಪೊಲೀಸರ ವಿರುದ್ಧ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಭಟ್ಕಳದ ಹನುಮ ನಗರದ ಹಿಂದೂ ಕಾರ್ಯಕರ್ತ ಶ್ರೀನಿವಾಸ್ ನಾಯ್ಕ್ ಎಂಬವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಹಲ್ಲೆಗೊಳಗಾದ ಶ್ರೀನಿವಾಸ್ ನಾಯ್ಕ್ ರನ್ನು ಈಗ ಭಟ್ಕಳದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳವಾರ ಶಿರಸಿಯಲ್ಲಿ ರೌಡಿಶೀಟರ್ ಗಳನ್ನು ಎಸ್ ಪಿ ಎಂ ನಾರಾಯಣ್ ಪೆರೇಡ್ ಮಾಡಿಸಿದ್ದರು. ಈ ವೇಳೆ 6 ಪ್ರಕರಣಗಳಲ್ಲಿ ಆರೋಪಿಯಾಗಿ ಗಡೀಪಾರಾಗಿದ್ದ ಆಟೋ ಚಾಲಕ ಶ್ರೀನಿವಾಸ್ ನಾಯ್ಕ್ ರನ್ನು ಭಟ್ಕಳ ಪೊಲೀಸರು ಶಿರಸಿಗೆ ಕರೆದೊಯ್ದಿದ್ದರು.
ಶಿರಸಿ ಠಾಣೆಯಲ್ಲಿ ತನಿಖೆ ನೆಪದಲ್ಲಿ ಎಸ್ ಪಿ ನಾರಾಯಣ್ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದರ ವಿರುದ್ಧ ವಿಶ್ವ ಹಿಂದೂ ಪರಿಷತ್, ಭಜರಂಗ ದಳ ಮತ್ತು ಬಿಜೆಪಿ ಕಾರ್ಯಕರ್ತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ತಮ್ಮ ವರ್ತನೆಗೆ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.