ಶೀಘ್ರದಲ್ಲೇ ಭೂ ಮಂಜೂರಾತಿ

ಸೋಮವಾರ, 14 ಮಾರ್ಚ್ 2022 (15:58 IST)
ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಮುದಿಗೆರೆಯಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ಸಾಗುವಳಿದಾರರಿಗೆ ಶೀಘ್ರದಲ್ಲೇ ಭೂ ಮಂಜೂರಾತಿ ಪತ್ರವನ್ನು ನೀಡಲಾಗುವುದು ಎಂದು ಕಂದಾಯ ಸಚಿವ ಅಶೋಕ್ ಅವರು ವಿಧಾನಸಭೆಗೆ ಉತ್ತರಿಸಿದರು.
ಶಾಸಕ ರಾಜೇಶ್‍ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಶಿರಾ ತಾಲ್ಲೂಕಿನ ಮುದಿಗೆರೆ ಗ್ರಾಮದ ಸರ್ವೆ ನಂ.12ರಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಶೀಘರದಲ್ಲೇ ಸರ್ವೇ ನಡೆಸಿ ಗಡಿ ಗುರುತಿಸುವಿಕೆ ಕೆಲಸ ಮಾಡಲಾಗುವುದು. ನಂತರ ಸಾಗುವಳಿದಾರರಿಗೆ ಭೂ ಮಂಜೂರಾತಿ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು.
 
ಭೂ ಮಂಜೂರಾತಿ ಮಾಡುವ ಕುರಿತು ಸಮಿತಿಯನ್ನು ರಚಿಸಲಾಗಿದೆ. ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಈ ಮೊದಲು ನಮಗೆ ಸಮೀಕ್ಷೆ ನಡೆಸಲು ಸರ್ವೇಯರ್‍ಗಳ ಕೊರತೆ ಇತ್ತು. ಈಗ ನೋಂದಾಯಿತ 3 ಸಾವಿರ ಸರ್ವೇಯರ್‍ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದಷ್ಟು ಬೇಗ ಗಡಿ ಗುರುತಿಸುವಿಕೆ ಕಾರ್ಯ ಮುಗಿದ ನಂತರ ಉಳುಮೆಚೀಟಿಯನ್ನು ರೈತರಿಗೆ ನೀಡಲಾಗುವುದು ಎಂದರು.
 
ಇದಕ್ಕೂ ಮುನ್ನ ರಾಜೇಶ್ ಗೌಡ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಶಿರಾದ ಅನೇಕ ಕಡೆ ಅಕ್ರಮ ಸಕ್ರಮ ಯೋಜನೆಯಡಿ ಬಡವರು ಜಮೀನನ್ನು ಸಾಗುವಳಿ ಮಾಡಿಕೊಂಡಿದ್ದಾರೆ. ಆದರೆ ಅರಣ್ಯ ಮತ್ತು ಕಂದಾಯ ಇಲಾಖೆ ಅಕಾರಿಗಳ ಕಿರುಕುಳದಿಂದ ಸಾಗುವಳಿ ಚೀಟಿ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಬೇಕೆಂದು ಮನವಿ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ