ಬೆಂಗಳೂರು: ಉಪ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಕಾಂಗ್ರೆಸ್ ನಲ್ಲಿ ಮಹತ್ವದ ಬದಲಾವಣೆಯಾಗುವುದು ಖಚಿತ ಎನ್ನುತ್ತಿದೆ ಇತ್ತೀಚೆಗಿನ ಕೆಲವು ವಿದ್ಯಮಾನಗಳು.
ದಾವಣಗೆರೆ ಮತ್ತು ಬಾಗಲಕೋಟೆಯ ಎರಡು ಕ್ಷೇತ್ರಗಳಿಗೆ ಮೊನ್ನೆಯಷ್ಟೇ ಉಪಚುನಾವಣೆ ನಡೆದಿದ್ದು ಫಲಿತಾಂಶ ಇನ್ನಷ್ಟೇ ಬರಬೇಕಿದೆ. ಈ ಬಾರಿ ದಾವಣಗೆರೆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದಿದ್ದರು. ಶ್ಯಾಮನೂರು ಶಿವಶಂಕರಪ್ಪನವರ ಕುಟುಂಬಕ್ಕೆ ಟಿಕೆಟ್ ನೀಡಿರುವುದು ಮುಸ್ಲಿಮರ ಕೋಪಕ್ಕೆ ಕಾರಣವಾಗಿತ್ತು.
ಕೊನೆಯ ಕ್ಷಣದಲ್ಲಿ ಸಾದಿಕ್ ಪೈಲ್ವಾನ್ ಮನವೊಲಿಸಿ ನಾಮಪತ್ರ ಹಿಂಪಡೆದರೂ ಕಾಂಗ್ರೆಸ್ ನ ಅಲ್ಪ ಸಂಖ್ಯಾತ ನಾಯಕರು ಅದರಲ್ಲೂ ಪ್ರಮುಖವಾಗಿ ಜಮೀರ್ ಅಹ್ಮದ್ ಪ್ರಚಾರಕ್ಕೇ ಹೋಗಿರಲಿಲ್ಲ. ಇದು ಹೈಕಮಾಂಡ್ ಗಮನಕ್ಕೆ ಬಂದಿದೆ.
ಹೀಗಾಗಿ ಕಾಂಗ್ರೆಸ್ ನ ಅಲ್ಪಸಂಖ್ಯಾತ ನಾಯಕರಾದ, ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್, ಸಿಎಂ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಸಚಿವ ಜಮೀರ್ ಅಹ್ಮದ್ ಗೆ ಸದ್ಯದಲ್ಲೇ ಎಐಸಿಸಿ ನೋಟಿಸ್ ನೀಡಲಿದೆ. ಒಂದು ವೇಳೆ ದಾವಣಗೆರೆಯಲ್ಲಿ ಸೋಲಾದರೆ ಜಮೀರ್ ಅಹ್ಮದ್ ಮಂತ್ರಿಗಿರಿಗೂ ಕುತ್ತು ಬಂದರೂ ಅಚ್ಚರಿಯಿಲ್ಲ.