ಕೊಡಗಿಗೆ ಅಮೋಘ ಕೊಡುಗೆ ನೀಡಿದ್ದ ಬಿಪಿನ್ ರಾವತ್

ಶುಕ್ರವಾರ, 10 ಡಿಸೆಂಬರ್ 2021 (15:33 IST)
ಯೋಧರ ನಾಡು ಕೊಡಗಿನ ಮೇಲೆ ಸೇನಾಪಡೆಗಳ ಮುಖ್ಯಸ್ಥ ಹುತಾತ್ಮ ಬಿಪಿನ್ ರಾವತ್ ಅವರಿಗೆ ಅದೇನೋ ವಿಶೇಷ ಪ್ರೀತಿಯಿತ್ತು. ಹೀಗಾಗಿಯೇ ಅವರು ಕೊಡಗಿಗೆ ವಿಶೇಷ ಕೊಡುಗೆ ನೀಡಿದ್ದರು. ಕೊಡಗು ಜಿಲ್ಲೆಗೆ ನಾಲ್ಕು ಬಾರಿ ಭೇಟಿಕೊಟ್ಟಿದ್ದರು.
ಹೌದು, 2016ರ ಆಗಸ್ಟ್ 7 ರಂದು ಮೊದಲ ಬಾರಿಗೆ ಕೊಡಗಿಗೆ ಬಂದಿದ್ದರು. ಕರ್ನಾಟಕ ಹಾಗೂ ಕೇರಳ ಸಬ್ ಏರಿಯಾದ ವತಿಯಿಂದ ನಡೆದಿದ್ದ, ನಿವೃತ್ತ ಯೋಧರ ಸಮಾವೇಶಕ್ಕೆ ಅಂದಿನ ಭೂಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಅವರೊಂದಿಗೆ ರಾವತ್ ಬಂದಿದ್ದರು. ಆಗ ರಾವತ್ ಅವರು ದಕ್ಷಿಣ ವಲಯ ಕಮಾಂಡರ್ ಇನ್ ಆರ್ಮಿ ಚೀಫ್ ಆಗಿದ್ದರು. 
ಭೂಸೇನಾ ಮುಖ್ಯಸ್ಥರಾದ ಬಳಿಕ 2017ರ ನವೆಂಬರ್ 4 ರಂದು ಕೊಡಗಿಗೆ ಬಂದಿದ್ದರು. ಜಿಲ್ಲೆಯ ಗೋಣಿಕೊಪ್ಪಲಿನ ಕಾವೇರಿ ಕಾಲೇಜು ಆರವಣದಲ್ಲಿ ನಿರ್ಮಿಸಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್ ತಿಮ್ಮಯ್ಯ ಅವರ ಪ್ರತಿಮೆಗಳ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಳಿಕ 2021ರ ಫೆಬ್ರವರಿ 6 ರಂದು ಜನರಲ್ ತಿಮ್ಮಯ್ಯ ಮ್ಯೂಸಿಯಂ ಲೋಕಾರ್ಪಣೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಆಗಮಿಸಿದ್ದರು. ಅವರೊಂದಿಗೂ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ಅವರು ಕೂಡ ಬಂದಿದ್ದರು. ಈ ಬಗ್ಗೆ ಏರ್ ಮಾರ್ಷಲ್ ಕೆ.ಸಿ ಕಾರ್ಯಪ್ಪ ನೆನೆಪಿಸಿಕೊಂಡಿದ್ದಾರೆ.
ಜನರಲ್ ತಿಮ್ಮಯ್ಯ ಮ್ಯೂಸಿಯಂಗಾಗಿ ಬೇಕಾಗಿದ್ದ ಅನುದಾನಕ್ಕಾಗಿ ಸಿಡಿಎಸ್ ಬಿಪಿನ್ ರಾವತ್ ಅವರನ್ನು ಹಲವು ಬಾರಿ ಭೇಟಿ ಮಾಡಿದ್ದೆ. ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳ ಮುಖ್ಯಸ್ಥರನ್ನು ಭೇಟಿ ಮಾಡಿದ್ದ ಪರಿಣಾಮವಾಗಿ ಮ್ಯೂಸಿಯಂ ನಿರ್ಮಾಣಕ್ಕೆ 20 ಲಕ್ಷ ವಿಶೇಷ ಕೊಡುಗೆಯನ್ನು ತರಲು ಸಾಧ್ಯವಾಗಿದೆ. ಅವರಿಗೆ ನಾನು ಅಭಾರಿಯಾಗಿದ್ದೇನೆ ಎಂದು ನಂದಾ ಕಾಯಪ್ಪ ಅವರು ನೆನಪಿಸಿಕೊಂಡಿದ್ದಾರೆ.
ಬಿಪಿನ್ ರಾವತ್ ಅವರಿಗೆ ಜಿಲ್ಲೆಯ ಮೇಲೆ ವಿಶೇಷ ಪ್ರೀತಿ ಇತ್ತು. ಹೀಗಾಗಿಯೇ ತಿಮ್ಮಯ್ಯ ಮ್ಯೂಸಿಯಂಗೆ ಯುದ್ಧ ಟ್ಯಾಂಕರ್, ಮಿಗ್ ಯುದ್ಧ ವಿಮಾನ, ತಿಮ್ಮಯ್ಯ ಅವರು ಸೇನೆಯಲ್ಲಿದ್ದಾಗ ಬಳಸುತ್ತಿದ್ದ ಯುದ್ಧ ಬಂದೂಕುಗಳು ಸೇರಿದಂತೆ ಅಗತ್ಯವಿರುವ ಸೇನೆಯ ಪರಿಕರಗಳನ್ನು ನೀಡುವಂತೆ ಕೇಳಿದಾಗ ಯಾವುದೇ ಮರುಮಾತನಾಡದೆ ಎಲ್ಲವನ್ನೂ ಒದಗಿಸಿಕೊಟ್ಟಿದ್ದರು ಎಂದು ತಿಮ್ಮಯ್ಯ ಫೋರಂನ ಮುಖಂಡ ಉಳಿಯಡ ಪೂವಯ್ಯ ಸ್ಮರಿಸಿದ್ದಾರೆ. ಜನರಲ್ ತಿಮ್ಮಯ್ಯ ಅವರಿಗೆ ಸಿಡಿಎಸ್ ಆಗುವುದಕ್ಕೆ ಅವಕಾಶವಿತ್ತು. ಅದನ್ನು ಲಾರ್ಡ್ ಮೌಂಟ್ ಬ್ಯಾಟನ್ ಅವರು ಅಂದಿನ ಪ್ರಧಾನಿಯವರಿಗೆ ಪತ್ರ ಬರೆದಿದ್ದರು. ಇದರ ಪತ್ರದ ಪ್ರತಿಯನ್ನು ಬಿಪಿನ್ ರಾವತ್ ಅವರು ತಿಮ್ಮಯ್ಯ ಮ್ಯೂಸಿಯಂ ಒದಗಿಸಿಕೊಟ್ಟಿದ್ದಾರೆ. ಜೊತೆಗೆ ಮ್ಯೂಸಿಯಂ ಉದ್ಘಾಟನೆಗೆ ಬಂದಿದ್ದ ಅವರು ‘ಇದೊಂದು ಅದ್ಭುತ ಗಳಿಗೆ, ತಿಮ್ಮಯ್ಯ ಅವರ ಹೆಸರು ಭಾರತೀಯ ಯೋಧರ ಮನಸ್ಸಿನಲ್ಲಿಯೂ ಉಳಿದಿದೆ’ ಎಂದು ಉದ್ಘರಿಸಿ ತಮ್ಮ ಹಸ್ತಾಕ್ಷರ ದಾಖಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ