ಬಿಟ್ ಕಾಯಿನ್ ಹಗರಣ: ಪೊಲೀಸರಿಂದ ಪಾರದರ್ಶಕ ನಡೆ; ಗೃಹ ಸಚಿವ ಆರಗ ಜ್ಞಾನೇಂದ್ರ

ಶುಕ್ರವಾರ, 17 ಡಿಸೆಂಬರ್ 2021 (18:16 IST)
ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಬಿಟ್ ಕಾಯಿನ್ ಹಗರಣದಲ್ಲಿ ಪೊಲೀಸರು ಅತ್ಯಂತ ಪಾರದರ್ಶಕವಾಗಿ ನಡೆದುಕೊಂಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಗುರುವಾರ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ ಅವರ ಚುಕ್ಕೆಗುರುತಿನ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 11 ಬಿಟ್‍ಕಾಯಿನ್ ಪ್ರಕರಣಗಳು ದಾಖಲಾಗಿವೆ. ಈ ಹಗರಣದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ನಿಯಮಾನುಸಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಡಾರ್ಕ್‍ವೆಬ್ ಮುಖಾಂತರ ಡ್ರಗ್ಸ್ ಪ್ರಕರಣದಲ್ಲಿ ಆರೋಪಿ ಶ್ರೀಕಿ ಸಿಕ್ಕಿ ಹಾಕಿಕೊಂಡಾಗ ಪೊಲೀಸರಿಗೆ ಬಿಟ್‍ಕಾಯಿನ್ ಹ್ಯಾಕರ್ ಅಂತ ಗೊತ್ತಿರಲಿಲ್ಲ. ವಿಚಾರಣೆ ನಡೆಸಿದ ನಂತರ ಶ್ರೀಕಿ ಹ್ಯಾಕರ್ ಎಂದು ಗೊತ್ತಾಯಿತು ಎಂದು ವಿವರಿಸಿದರು.
ನಿಯಮಾನುಸಾರ ಯಾವ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಬೇಕಾಗಿತ್ತೋ ಅವುಗಳನ್ನು ದಾಖಲಿಸಲಾಗಿದೆ ಎಂದ ಅವರು, ಶ್ರೀಕಿಯನ್ನು ಉಳಿಸುವ ಅಗತ್ಯ ನಮಗಿಲ್ಲ. ನಿಯಮಾನುಸಾರ ಏನು ಮಾಡಬೇಕೋ ಅವುಗಳನ್ನು ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಶ್ರೀಕಿಗೆ ಪೊಲೀಸರೇ ಡ್ರಗ್ಸ್ ಸೇವನೆ ಮಾಡಲು ಹೇಳುತ್ತಿದ್ದಾರೆ ಮತ್ತು ಆತನಿಗೆ ಹಿಂಸೆ ನೀಡಿ ಠಾಣೆಗೆ ಕರೆಯಿಸಿ ಬಿಟ್‍ಕಾಯಿನ್‍ಗಳನ್ನು ಹ್ಯಾಕ್ ಮಾಡಿಸಿಕೊಂಡಿದ್ದಾರೆ. ಪೊಲೀಸ್ ಇಲಾಖೆಯ ಕೆಲ ಪರೀಕ್ಷೆಗಳಲ್ಲಿ 22 ಅಭ್ಯರ್ಥಿಗಳ ಅಂಕಗಳನ್ನು ಪೊಲೀಸರು ಹ್ಯಾಕ್ ಮಾಡಿಸಿಕೊಂಡಿದ್ದಾರೆ ಎಂದು ಯು.ಬಿ.ವೆಂಕಟೇಶ ಆರೋಪಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ