ಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆಯೇ ಆಗಬೇಕು: ಬಿಜೆಪಿ ಪಟ್ಟು

Krishnaveni K

ಸೋಮವಾರ, 30 ಸೆಪ್ಟಂಬರ್ 2024 (14:41 IST)
ಬೆಂಗಳೂರು: ವಿಧಾನಮಂಡಲದ ಸದನ ಅನಿರ್ದಿಷ್ಟ ಕಾಲ ಮುಂದೂಡಲ್ಪಟ್ಟ ದಿನವಾದ ಜುಲೈ 25ರಂದೇ ಮಾನ್ಯ ಮುಖ್ಯಮಂತ್ರಿಗಳು ಆದೇಶ ಹೊರಡಿಸಿ ಮನೀಶ್ ಕರ್ವೇಕರ್ ಅವರನ್ನು ಲೋಕಾಯುಕ್ತ ಚೀಫ್ ಆಗಿ ಮಾಡಿದ್ದಾರೆ. ಇದರ ಹಿಂದೆ ತಮ್ಮ ತಪ್ಪನ್ನು ಸಂಪೂರ್ಣವಾಗಿ ಸಂರಕ್ಷಿಸಿಕೊಳ್ಳುವ ಷಡ್ಯಂತ್ರ ನಡೆದಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ಆರೋಪಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಕಾರಣಕ್ಕೆ ಮುಖ್ಯಮಂತ್ರಿಗಳು ಪ್ರಕರಣವನ್ನು ಲೋಕಾಯುಕ್ತದಿಂದಲೇ ತನಿಖೆ ಆಗಬೇಕೆಂದು ಒತ್ತಾಯಿಸಿದ್ದರು. ಲೋಕಾಯುಕ್ತ ಪೊಲೀಸ್ ಅಧಿಕಾರಿಗೆ ಹೆಚ್ಚುವರಿಯಾಗಿ ಸರಕಾರದ ಅಧೀನ ಸಂಸ್ಥೆಗಳ ತನಿಖೆ ಜವಾಬ್ದಾರಿ ಕೊಟ್ಟ ಉದಾಹರಣೆ ಇಡೀ ಭಾರತ ದೇಶದಲ್ಲಿ ಇಲ್ಲ. ಅಂಥ ಒಂದು ಕೆಟ್ಟ ಪರಂಪರೆಯನ್ನು ಸಿದ್ದರಾಮಯ್ಯನವರು ಪ್ರಾರಂಭಿಸಿದ್ದಾರೆ ಎಂದು ಆಕ್ಷೇಪಿಸಿದರು.

ಹಾಗಾಗಿ, ನಿಷ್ಪಕ್ಷಪಾತ ತನಿಖೆ ಆಗಬೇಕೆಂದರೆ ಇದು ಸಿಬಿಐನಿಂದಲೇ ಆಗಬೇಕು. ನ್ಯಾಯಾಲಯದ ಮೂಲಕ ಸಿಬಿಐ ತನಿಖೆ ನಡೆಸುವ ಪ್ರಕ್ರಿಯೆ ಆಗಬೇಕು ಎಂದು ಅವರು ದೂರುದಾರರಿಗೆ ಮನವಿ ಮಾಡಿದರು. ಮುಖ್ಯಮಂತ್ರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ರಾಜ್ಯದ ಮುಖ್ಯಮಂತ್ರಿ ವಿರುದ್ಧ ಅಧಿಕಾರಿಗಳು ಯಾವ ರೀತಿ ತನಿಖೆಯನ್ನು ಕೈಗೊಳ್ಳಬಹುದು? ಆರೋಪಿತ ಮುಖ್ಯಮಂತ್ರಿಯನ್ನು ತೀವ್ರ ವಿಚಾರಣೆಗೆ ಒಳಪಡಿಸುವ ಧೈರ್ಯ ಪೊಲೀಸ್ ಅಧಿಕಾರಿಗಳಿಗೆ ಇದೆಯೇ ಎಂದು ಕೇಳಿದರು.
 
ಲೋಕಾಯುಕ್ತದ ಶಕ್ತಿ ಕುಂದಿಸಿದ್ದ ಮುಖ್ಯಮಂತ್ರಿ..
ಮುಖ್ಯಮಂತ್ರಿಗಳು ತಮ್ಮ ವಿರುದ್ಧದ ಪ್ರಕರಣ ಸಿಬಿಐ ಅಥವಾ ಲೋಕಾಯುಕ್ತಕ್ಕೆ ಹೋಗಲಿದೆ ಎಂದು ಮೊದಲೇ ಗ್ರಹಿಸಿದ್ದರು. ಹಾಗಾಗಿ ತಮ್ಮನ್ನು ರಕ್ಷಿಸಲು ಆ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರ ವಿರುದ್ಧ ಲೋಕಾಯುಕ್ತದಲ್ಲಿ 70ಕ್ಕೂ ಹೆಚ್ಚು ಪ್ರಕರಣಗಳು ತನಿಖಾ ಹಂತದಲ್ಲಿ ಇರುವಾಗಲೇ ಲೋಕಾಯುಕ್ತದ ಶಕ್ತಿ ಕುಂದಿಸುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಿದ್ದರು. ಆದರೆ, ಮುಡಾ ಪ್ರಕರಣ ದಾಖಲಾಗುತ್ತಿದ್ದಂತೆ ಮುಖ್ಯಮಂತ್ರಿಗಳು ತಮ್ಮ ರಕ್ಷಣೆ ಮಾಡಿಕೊಳ್ಳಲು ಸಚಿವಸಂಪುಟದ ಅನುಮತಿ ಇಲ್ಲದೇ ಸಿಬಿಐ ತನಿಖೆ ಮಾಡಬಾರದು ಎಂಬ ಬದಲಾವಣೆ ಮಾಡಿ ಭ್ರಷ್ಟಾಚಾರ ಮುಚ್ಚಿಟ್ಟುಕೊಳ್ಳುವ ಪ್ರಯತ್ನ ಮಾಡಿದರು ಎಂದು ದೂರಿದರು.
 
ಸಿಎಂ ಆಘಾತಕಾರಿ ಕೆಲಸ..
ಜುಲೈ 25ರಂದು ಐಪಿಎಸ್ ಅಧಿಕಾರಿ ಮನೀಶ್ ಕರ್ವೇಕರ್ ಅವರನ್ನು ಲೋಕಾಯುಕ್ತ ಎಡಿಜಿಪಿ ಆಗಿ ಆದೇಶ ಹೊರಡಿಸಿದ್ದರು. ಭಾರತದ ಇತಿಹಾಸದಲ್ಲಿ ಲೋಕಾಯುಕ್ತ ಇರುವ ಯಾವ ರಾಜ್ಯದಲ್ಲೂ ಇಂಥ ಆದೇಶ ಬಂದಿರಲಾರದು. ಮನೀಶ್ ಕರ್ವೇಕರ್ ಅವರನ್ನು ಲೋಕಾಯುಕ್ತ ಎಡಿಜಿಪಿ ಆಗಿ ಆದೇಶ ಹೊರಡಿಸಿ ಮುಂದೆ ಎಸ್‍ಐಟಿ ಚೀಫ್ ಆಗಿ ಹೆಚ್ಚುವರಿ ಕಾರ್ಯಭಾರವನ್ನೂ ಮುಂದುವರೆಸಿದ್ದಾರೆ; ಇದೊಂದು ಆಘಾತಕಾರಿ ಕೆಲಸ ಎಂದು ಆಕ್ಷೇಪ ವ್ಯಕ್ತಪಡಿಸಿದರು. 

ಮುಖ್ಯಮಂತ್ರಿಗಳು ಮನೀಶ್ ಕರ್ವೇಕರ್ ಅವರನ್ನು ಲೋಕಾಯುಕ್ತದ ಸ್ವಾಯತ್ತ ಸಂಸ್ಥೆಗೆ ವರ್ಗಾವಣೆ ಮಾಡಿದ್ದಾರೆ. ಎಸ್‍ಐಟಿ ಚೀಫ್ ಆಗಿ ಅಡಿಷನಲ್ ಚಾರ್ಜ್ ಕೊಟ್ಟಿದ್ದಾರೆ. ಎಸ್‍ಐಟಿ ಯಾರ ನಿಯಂತ್ರಣದಲ್ಲಿದೆ? ಯಾರಿಗೆ ವರದಿ ಕೊಡಬೇಕು? ಲೋಕಾಯುಕ್ತದಲ್ಲಿ ತನಿಖೆ ಮಾಡುವಾಗ ಯಾವ ರಾಜಕಾರಣಿಗೂ ಉತ್ತರ ಕೊಡುವಂತಿಲ್ಲ. ಆದರೆ, ಎಸ್‍ಐಟಿ ಮುಖ್ಯಸ್ಥರಾಗಿ ಪ್ರತಿ ಹಂತದ ಬೆಳವಣಿಗೆಯನ್ನು ಗೃಹ ಸಚಿವರು, ಮುಖ್ಯಮಂತ್ರಿಗಳ ಮುಂದೆ ವರದಿ ಮಾಡಿಕೊಳ್ಳುತ್ತಾರೆ. ಅಂದರೆ, ಒಂದು ಕಡೆ ಸಂಪೂರ್ಣ ಸ್ವಾಯತ್ತತೆ (ಅಟೊನಮಸ್), ಇನ್ನೊಂದು ಕಡೆ ನಿಯಂತ್ರಣ. ಇದು ಹೇಗೆ ಎಂದು ಕೇಳಿದರು.
 
ಎಸ್‍ಐಟಿ ಮೇಲೆ ವಿಶ್ವಾಸಾರ್ಹತೆ ಇಲ್ಲ..
ಎಸ್‍ಐಟಿ ಮೇಲೆ ವಿಶ್ವಾಸಾರ್ಹತೆ ಹೊರಟುಹೋಗಿದೆ. ಈಚಿನ ನ್ಯಾಯಾಲಯದ ಪ್ರಕರಣಗಳಲ್ಲಿ ನ್ಯಾಯಾಧೀಶರು ಮಾತನಾಡಿದ್ದನ್ನು ಗಮನಿಸಿದಾಗ ಎಸ್‍ಐಟಿ, ಯಾರದ್ದೋ ಓಲೈಕೆಗಾಗಿ ಕೆಲಸ ಮಾಡುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ವಿಶ್ಲೇಷಿಸಿದರು. ಮಹರ್ಷಿ ವಾಲ್ಮೀಕಿ ನಿಗಮದ ಹಗರಣದ ತನಿಖೆ, ಕ್ರಿಪ್ಟೊ ಕರೆನ್ಸಿ ಹ್ಯಾಕ್ ಮಾಡಿದ ಹಗರಣ ತನಿಖೆಯಲ್ಲಿ ಮನೀಶ್ ಕರ್ವೇಕರ್ ಅವರಿಗೆ ಎಸ್‍ಐಟಿ ಮುಖ್ಯಸ್ಥರಾಗಿ ಜವಾಬ್ದಾರಿ ಕೊಟ್ಟಿದ್ದಾರೆ ಎಂದು ವಿವರಿಸಿದರು.

ಪೊಲೀಸ್ ಅಧಿಕಾರಿಗಳು ಎಸ್‍ಐಟಿ ಮುಖ್ಯಸ್ಥರಾಗಿ ಮಹರ್ಷಿ ವಾಲ್ಮೀಕಿ ನಿಗಮದ ಹಗರಣದಲ್ಲಿ ನಾಗೇಂದ್ರರಿಗೆ ಕ್ಲೀನ್ ಚಿಟ್ ಕೊಟ್ಟಿದ್ದು, ಇದು ರಾಜ್ಯದ ಜನತೆಗೆ ಸಂಶಯ ಕಾಡುವಂತೆ ಮಾಡಿದೆ. ಹಣ ದುರ್ಬಳಕೆ, ಬಳ್ಳಾರಿ, ರಾಯಚೂರು ಲೋಕಸಭಾ ಚುನಾವಣೆಗೆ ದುರ್ಬಳಕೆ ಆಗಿದೆ ಎಂದು ಇ.ಡಿ. ವರದಿ ಕೊಟ್ಟಿದೆ. ಎಸ್‍ಐಟಿ ಮಾತ್ರ ನಾಗೇಂದ್ರರ ಹೆಸರು ಕೈಬಿಟ್ಟಿದೆ ಎಂದು ತಿಳಿಸಿದರು. 

ಎಸ್‍ಐಟಿ ಮುಖ್ಯಸ್ಥರಾಗಿ ಇವರು ಕ್ರಿಪ್ಟೊ ಕರೆನ್ಸಿಯ ತನಿಖೆಯನ್ನು ಏನು ಮಾಡಿದ್ದಾರೆ? ಸಾವಿರಾರು ಕೋಟಿ ಹಗರಣ ಎಂದು ಪ್ರಿಯಾಂಕ್ ಖರ್ಗೆ ದಾಖಲೆಗಳಿಲ್ಲದೆ ಆರೋಪಿಸಿದ್ದರು. ಮನೀಶ್ ಕರ್ವೇಕರ್ ಅವರು ಪ್ರಿಯಾಂಕ್ ಖರ್ಗೆ, ಇವರಿಗೆ ಪೂರಕ ಹೇಳಿಕೆ ಕೊಟ್ಟ ಸಿದ್ದರಾಮಯ್ಯ, ಗೃಹ ಸಚಿವರ ಹೇಳಿಕೆ ಸತ್ಯ ಎಂದು ಸಾಬೀತುಪಡಿಸಲು ಪ್ರಯತ್ನಿಸಿದ್ದಾರೆ ಎಂದು ಟೀಕಿಸಿದರು.

ಮನೀಶ್ ಕರ್ವೇಕರ್ ಅವರು ಇಲ್ಲಿನವರೆಗೆ ಎರಡು ವರ್ಷದ ಅವಧಿಯಲ್ಲಿ ತನಿಖೆ ಮಾಡಿ ಅಮಾಯಕ ಪೊಲೀಸ್ ಅಧಿಕಾರಿಗಳನ್ನು ಬಂಧಿಸಿದ್ದು ಬಿಟ್ಟರೆ ಬೇರ್ಯಾವ ಸಾಧನೆಯನ್ನೂ ಮಾಡಿಲ್ಲ. ಯಾವುದೇ ತಪ್ಪು ಮಾಡದ ತನಿಖಾಧಿಕಾರಿ, ಇನ್‍ಸ್ಪೆಕ್ಟರ್‍ಗಳಾದ ಪ್ರಶಾಂತಬಾಬು, ಲಕ್ಷ್ಮೀಕಾಂತ್, ಚಂದ್ರಧರರನ್ನು ಅರೆಸ್ಟ್ ಮಾಡಿ ಕಳಿಸಿದ್ದಾರೆ. ಅವರಿಂದ ರಿಕವರಿ ಏನಾಗಿದೆ? ಒಂದು ರೂಪಾಯಿ ಮೌಲ್ಯದ ಬಿಟ್ ಕಾಯಿನ್ ರಿಕವರಿ ಮಾಡಲು ಇವರಿಗೆ ಆಗಿಲ್ಲ ಎಂದು ಆರೋಪಿಸಿದರು.
 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ