ವಿಧಾನಸೌಧಕ್ಕೆ ಬೀಗ ಹಾಕಲೆತ್ನಿಸಿದ ಬಿಜೆಪಿ ನಾಯಕರು: ಕೈಕಾಲೆತ್ತಿ ಹೊರಗೆ ಕಳುಹಿಸಿದ ಪೊಲೀಸರು

Krishnaveni K

ಗುರುವಾರ, 26 ಸೆಪ್ಟಂಬರ್ 2024 (14:52 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರಾಜ್ಯ ಬಿಜೆಪಿ ನಾಯಕರು ಇಂದು  ವಿಧಾನಸೌಧಕ್ಕೆ ಬೀಗ ಹಾಕಲು ಯತ್ನಿಸಿದರು. ಈ ವೇಳೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಮೊದಲು ವಿಧಾನಸೌಧದ ಮುಂಭಾಗ ಗಾಂಧಿ ಪ್ರತಿಮೆಯ ಮುಂದೆ ಭಿತ್ತಿಪತ್ರಗಳನ್ನು ಹಿಡಿದು ಬಿಜೆಪಿ ಶಾಸಕರು, ಸಂಸದರು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು. ಇದಾಗಿ ಕೆಲ ಹೊತ್ತಿನ ಬಳಿಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ್ದಾರೆ. ಈ ವೇಳೆ ವಿಧಾನಸೌಧಕ್ಕೆ ಬೀಗ ಜಡಿಯಲೂ ಮುಂದಾಗಿದ್ದಾರೆ.

ವಿಧಾನಪರಿಷತ್ ನಾಯಕ ಛಲವಾದಿ ನಾರಾಯಣಸ್ವಾಮಿ ದೊಡ್ಡ ಗಾತ್ರದ ಬೀಗ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಬಿಜೆಪಿ ನಾಯಕರನ್ನು ಬಂಧಿಸಿ ಹೊರಗೆ ಕರೆದೊಯ್ದಿದ್ದಾರೆ. ಇಂದು ಬಿಜೆಪಿ ನಾಯಕರು ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾಗ ಸಿಎಂ ಸಿದ್ದರಾಮಯ್ಯ ಕೂಡಾ ಒಳಗಿದ್ದರು.

ಇನ್ನು, ಬಿಜೆಪಿ ನಾಯಕರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ ಎಂದು ಮೊದಲೇ ಮಾಹಿತಿಯಿದ್ದಿದ್ದರಿಂದ ಪೊಲೀಸರು ಭಾರೀ ಸಂಖ್ಯೆಯಲ್ಲಿ ಇದ್ದು ಭದ್ರತೆ ಒದಗಿಸಿದ್ದರು. ಪೊಲೀಸರ ಕಣ್ಣು ತಪ್ಪಿಸಿ ಅರವಿಂದ್ ಬೆಲ್ಲದ ಬೀಗ ಹಾಕಲೆತ್ನಿಸಿದರು. ಆಗ ಹೈಡ್ರಾಮಾವೇ ನಡೆಯಿತು. ಕೊನೆಗೆ ಪೊಲೀಸರು ಎಲ್ಲಾ ನಾಯಕರನ್ನು ವಶಕ್ಕೆ ಪಡೆದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ