ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ ಬಿಜೆಪಿ ಸಂಸದ

ಬುಧವಾರ, 12 ಏಪ್ರಿಲ್ 2017 (18:39 IST)
ಮಹಾನಗರಪಾಲಿಕೆಯ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸಂಸದ ಶ್ರಿರಾಮುಲು ಕಾಂಗ್ರೆಸ್ ಪಕ್ಷದ ಪರ ಮತ ಚಲಾಯಿಸಿ ಅಚ್ಚರಿ ಮೂಡಿಸಿದ್ದಾರೆ.
 
ಕಾಂಗ್ರೆಸ್ ಮುಕ್ತ ಭಾರತ ಬಿಜೆಪಿ ಪಕ್ಷದ ಗುರಿ ಎಂದು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಗುಡುಗುತ್ತಿರುವ ಸಂದರ್ಭದಲ್ಲಿಯೇ ಬಿಜೆಪಿ ಸಂಸದರೊಬ್ಬರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಪಕ್ಷ ವಿರೋಧಿ ಕೃತ್ಯ ಮೆರೆದಿದ್ದಾರೆ. 
 
ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿ. ವೆಂಕಟರಮಣ ಪರವಾಗಿ ಸಂಸದ ಶ್ರೀರಾಮುಲು ಹಾಗೂ ಇತರ ನಾಲ್ವರು ಬಿಜೆಪಿ ಸದಸ್ಯರು ಮತ ಹಾಕಿದ್ದಾರೆ.
 
ಕಾಂಗ್ರೆಸ್ ಪಕ್ಷದಲ್ಲಿಯೇ ಎರಡು ಗುಂಪುಗಳಾಗಿದ್ದರಿಂದ ಮೇಯರ್, ಉಪಮೇಯರ್ ಸ್ಥಾನ ಯಾರಿಗೆ ದಕ್ಕಲಿದೆ ಎನ್ನುವ ಬಗ್ಗೆ ತೀವ್ರ ಕುತೂಹಲ ಕೆರಳಿಸಿತ್ತು. 
 
ಕಾಂಗ್ರೆಸ್ ಮುಖಂಡರಾದ ಮಾಜಿ ಸಚಿವ ದಿವಾಕರ್ ಬಾಬು ಮತ್ತು ಸಚಿವ ಸಂತೋಷ್ ಲಾಡ್ ಗುಂಪಿನ ನಡುವೆ ಮೇಯರ್ ಸ್ಥಾನ ಕುರಿತಂತೆ ಹಣಾಹಣಿ ಏರ್ಪಟ್ಟಿತ್ತು. ಸಚಿವ ಲಾಡ್ ಗುಂಪಿನ ಅಭ್ಯರ್ಥಿಗಳಾಗಿ ಜಿ.ವೆಂಕಟರಮಣ ಮತ್ತು ಉಮಾದೇವಿ, ಕ್ರಮವಾಗಿ ಮೇಯರ್, ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದರು.
 
ಮಾಜಿ ಸಚಿವ ದಿವಾಕರಬಾಬು ಗುಂಪಿನಿಂದ ಗಾಜಲು ಶ್ರೀನಿವಾಸ್ ಹಾಗೂ ಲಕ್ಷ್ಮಿ, ಮೇಯರ್, ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. 
 
ಬಳ್ಳಾರಿ ನಗರಪಾಲಿಕೆಯ ಹಿರಿಯ ಸದಸ್ಯರಾದ ಜಿ. ವೆಂಕಟರಮಣ 24 ಮತ ಪಡೆದು ಮೇಯರ್ ಸ್ಥಾನ ಅಲಂಕರಿಸಿದರೆ, ಉಮಾದೇವಿ 20 ಮತಗಳನ್ನು ಪಡೆದು ಉಪ ಮೇಯರ್ ಆಗಿ ಆಯ್ಕೆಯಾದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ