ಜುಲೈ 2, 3 ರಂದು ಹೈದರಾಬಾದ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ

ಗುರುವಾರ, 2 ಜೂನ್ 2022 (20:12 IST)
ಮುಂಬರುವ ವಿಧಾನಸಭೆ ಚುನಾವಣೆ ಮತ್ತು 2024ರ ಸಾರ್ವತ್ರಿಕ ಚುನಾವಣೆಗಳಿಗೆ ಪಕ್ಷದ ಕಾರ್ಯತಂತ್ರ ರೂಪಿಸುವ ದೃಷ್ಟಿಯಿಂದ ಜುಲೈ 2 ಮತ್ತು 3ರಂದು ಹೈದರಾಬಾದ್‌ನಲ್ಲಿ ಬಿಜೆಪಿಯು ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಹಮ್ಮಿಕೊಂಡಿದೆ. ಈ ಕಾರ್ಯಕಾರಣಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಪಕ್ಷದ ಮುಂಚೂಣಿ ನಾಯಕರು ಭಾಗವಹಿಸಲಿದ್ದಾರೆ.
 
15 ದಿನಗಳ ಹಿಂದೆ ಜೈಪುರದಲ್ಲಿ 3 ದಿನ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ನಡೆದಿತ್ತು. ನಂತರ ಇದು ಎರಡನೇ ಪ್ರಮುಖ ಸಭೆಯಾಗಿದೆ. ಮುಂಬರುವ ಚುನಾವಣೆಗೆ ರಣತಂತ್ರ ರೂಪಿಸುವ ಕಾರ್ಯಸೂಚಿಯೊಂದಿಗೆ ಕಾರ್ಯಕಾರಣಿಯನ್ನು ಹಮ್ಮಿಕೊಳ್ಳಲಾಗಿದ್ದು ಅದಕ್ಕಾಗಿ ಈ ಬಾರಿ ತೆಲಂಗಾಣ ರಾಜ್ಯವನ್ನು ಆಯ್ಕೆ ಮಾಡಿಕೊಂಡಿದೆ. ತೆಲಂಗಾಣವನ್ನೇ ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣಗಳಿವೆ. ಇಡೀ ದಕ್ಷಿಣ ಭಾರತದಲ್ಲಿ ಈಗಾಗಲೇ ಅಧಿಕಾರದಲ್ಲಿರುವ ಕರ್ನಾಟಕದ ನಂತರ ಬಿಜೆಪಿಗೆ ಗೆಲ್ಲಬಹುದು ಎನ್ನುವ ಆಶಾಭಾವನೆ ಹುಟ್ಟಿಸಿರುವುದು ತೆಲಂಗಾಣ ರಾಜ್ಯ ಮಾತ್ರ. ತೆಲಂಗಾಣದಲ್ಲಿ ಇತ್ತೀಚಿಗೆ ನಡೆದ ಉಪ‌ ಚುನಾವಣೆ ಮತ್ತು ರಾಜಧಾನಿ ಹೈದರಾಬಾದ್ ಮುನ್ಸಿಪಲ್ ಕಾರ್ಪೂರೇಷನ್ ಚುನಾವಣೆಗಳಲ್ಲಿ ಕೇಸರಿ ಪಕ್ಷವು ಉತ್ತಮ ಸಾಧನೆ ಮಾಡಿದೆ.
 
2013ರಲ್ಲಿ ಉದಯವಾದ ತೆಲಂಗಾಣ ರಾಜ್ಯದಲ್ಲಿ 2023ಕ್ಕೆ ಮತ್ತೆ ವಿಧಾನಸಭಾ ಚುನಾವಣೆ ನಡೆಯಲಿದೆ. ಆಂಧ್ರ ಪ್ರದೇಶದಿಂದ ತೆಲಂಗಾಣ ಪ್ರತ್ಯೇಕ ರಾಜ್ಯ ಆಗಬೇಕು ಎಂದು ಹೋರಾಟ ನಡೆಸಿದ್ದ ತೆಲಂಗಾಣ ಹೋರಾಟ ಸಮಿತಿ (ಟಿಆರ್‌ಎಸ್) ಈಗಾಗಲೇ ಎರಡು ಅವಧಿಗಳ ಅಧಿಕಾರ ಮುಗಿಸುತ್ತಿದ್ದು ಮೂರನೇ ಅವಧಿಗೂ ಅಧಿಕಾರ ಹಿಡಿಯುವ ಕನಸು ಕಾಣುತ್ತಿದೆ. ನಿರಂತರವಾಗಿ 10 ವರ್ಷ ಆಡಳಿತದಲ್ಲಿ ಇದ್ದ ಕಾರಣಕ್ಕೆ ತೆಲಂಗಾಣ ಹೋರಾಟ ಸಮಿತಿ ಬಗ್ಗೆ ಅದಕ್ಕೂ ಮಿಗಿಲಾಗಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಬಗ್ಗೆ ಜನಾಕ್ರೋಶವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಆಡಳಿತ ವಿರೋಧಿ ಅಲೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಬಿಜೆಪಿ ಲೆಕ್ಕಾಚಾರ ಹಾಕುತ್ತಿದೆ.
 
ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಬಗ್ಗೆ ಜನಾಕ್ರೋಶದ ಜೊತೆಗೆ ಜನಾಶೀರ್ವಾದವೂ ಇದೆ. ತೆಲಂಗಾಣ ಪ್ರತ್ಯೇಕ ಆಗಬೇಕೆಂಬ ದಶಕಗಳ ಬೇಡಿಕೆ ಸಾಕಾರಗೊಳಿಸಿದವರು ಎಂಬ ಕಾರಣಕ್ಕೆ ಮತ್ತು ಮೊದಲ ಅವಧಿಯಲ್ಲಿ ಮಾಡಿದ ಜನಪರ ಕಾರ್ಯಕ್ರಮಗಳಿಂದ ಅವರನ್ನು ನಿರ್ಲಕ್ಷ್ಯವನ್ನಂತೂ ಮಾಡಲು ಸಾಧ್ಯವಿಲ್ಲ. ಹಾಗಾಗಿ ಬಿಜೆಪಿ ತೆಲಂಗಾಣದಲ್ಲಿ ಅಭಿವೃದ್ಧಿ ವಿಷಯಗಳನ್ನು ಪಕ್ಕಕ್ಕೆ ಇಟ್ಟು ಹಿಂದುತ್ವವನ್ನು ಆಕ್ರಮಣಕಾರಿಯಾಗಿ ಪ್ರತಿಪಾದಿಸುತ್ತಿದೆ. ಕಡೆಯ ಪಕ್ಷ ಈ ಬಾರಿ ಕಾಂಗ್ರೆಸಿನಿಂದ ಪ್ರತಿಪಕ್ಷ ಸ್ಥಾನವನ್ನಾದರೂ ಕಿತ್ತುಕೊಳ್ಳಬೇಕು ಎಂಬ ಯೋಚನೆಯಲ್ಲಿದೆ. ಇದೇ ಹಿನ್ನೆಲೆಯಲ್ಲಿ ಹೈದರಾಬಾದ್ ಅನ್ನು ಬಿಜೆಪಿ ತನ್ನ‌ ಕಾರ್ಯತಂತ್ರ ರೂಪಿಸುವ ಕರ್ಮಭೂಮಿಯನ್ನಾಗಿ ಆಯ್ಕೆ ಮಾಡಿಕೊಂಡಿದೆ.
 
ಚಂದ್ರಶೇಖರ್ ರಾವ್ 2024ರ ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿ ವಿರುದ್ಧ ಹೋರಾಡಲು ಪ್ರಾದೇಶಿಕ ರಂಗವನ್ನು ರೂಪಿಸಲು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಹಲವು ಕಡೆ ಪ್ರವಾಸ ಮಾಡಿದ್ದಾರೆ. ಹಲವು ಪ್ರಾದೇಶಿಕ ನಾಯಕರನ್ನು ಭೇಟಿ ಮಾಡಿದ್ದಾರೆ. ಮೊನ್ನೆ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನೂ ಭೇಟಿ ಮಾಡಿದ್ದರು. ಹೀಗೆ ಚಂದ್ರಶೇಖರ್ ರಾವ್ ತಮ್ಮ ವಿರುದ್ಧ ತಿರುಗಿಬಿದ್ದಿರುವುದಕ್ಕೆ ಪ್ರತಿತಂತ್ರ ರೂಪಿಸಬೇಕೆಂದು ನಿಶ್ಚಯಿಸಿರುವ ಬಿಜೆಪಿ ನಾಯಕರು ತೆಲಂಗಾಣ ವಿಧಾನಸಭಾ ಚುನಾವಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ. 
 
ಇದಕ್ಕೂ ಮೊದಲು 2014ಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ದಕ್ಷಿಣ ಭಾರತದ ಕರ್ನಾಟಕ ಮತ್ತು ಕೇರಳದಲ್ಲೂ ರಾಷ್ಟ್ರೀಯ ಕಾರ್ಯಕಾರಣಿ ಹಮ್ಮಿಕೊಂಡಿತ್ತು. ದಕ್ಷಿಣ ಭಾರತದಲ್ಲಿ ಬಿಜೆಪಿಯ ಮೂರನೇ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಈಗ ಹೈದರಾಬಾದಿನಲ್ಲಿ ನಡೆಯಲಿದೆ. ಬಿಜೆಪಿಯ ಕೊನೆಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು 2021ರ ನವೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ನಡೆದಿತ್ತು. ಅಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾ ಅಸೆಂಬ್ಲಿ ಚುನಾವಣೆಗಳ ಬಗ್ಗೆ ಚರ್ಚೆ ಮಾಡಿತ್ತು. ಆ 5 ರಾಜ್ಯಗಳ ಪೈಕಿ 4ರಲ್ಲಿ ಬಿಜೆಪಿ ಗೆದ್ದಿತ್ತು. ಇದು ಕೂಡ ಹೈದರಾಬಾದ್ ಆಯ್ಕೆ ಮಾಡಿಕೊಳ್ಳಲು ಕಾರಣವಾಗಿದೆ‌.
 
ಬಿಜೆಪಿಯು 2019ರ ಲೋಕಸಭಾ ಚುನಾವಣೆಯಲ್ಲಿ ಸೋತ 144 ಸ್ಥಾನಗಳ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಲು ಯೋಜಿಸುತ್ತಿದೆ. ಅದಕ್ಕಾಗಿ ಮುಂದಿನ ಸಾರ್ವತ್ರಿಕ ಚುನಾವಣೆಗೂ ಮೊದಲು ಕಾರ್ಯಕರ್ತರನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಇದೇ ಹಿನ್ನೆಲೆಯಲ್ಲಿ ರಾಜ್ಯಗಳಿಗೆ ಕೇಂದ್ರ ಮಂತ್ರಿಗಳ ನಿಯಮಿತ ಭೇಟಿ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿದೆ. ಇತ್ತೀಚೆಗೆ 5ರಲ್ಲಿ 4 ರಾಜ್ಯಗಳನ್ನು ಗೆದ್ದ ನಂತರ ವಿಶ್ರಾಂತಿ ಪಡೆಯದ ಬಿಜೆಪಿ, ಮೇ 19, 20 ಮತ್ತು 21ರಂದು ರಾಜಸ್ಥಾನದ ಜೈಪುರದಲ್ಲಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ನಡೆಸಿತ್ತು‌.  ಮೇ 31ರಂದು ಮುಕ್ತಾಯಗೊಂಡ ಬೂತ್ ಸಬಲೀಕರಣ ಅಭಿಯಾನಕ್ಕಾಗಿ ಸಮಿತಿಯನ್ನು ರಚಿಸಿತ್ತು. ಈಗ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಆಯೋಜಿಸುತ್ತಿದೆ‌.
 
ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯು ಪ್ರತ್ಯೇಕ ನಿರ್ಣಯಗಳ ಮೂಲಕ ಪಕ್ಷವು ಭವಿಷ್ಯಕ್ಕಾಗಿ ತನ್ನ ರಾಜಕೀಯ ಮತ್ತು ಆರ್ಥಿಕ ಮಾರ್ಗಸೂಚಿಯನ್ನು ನಿರ್ಧರಿಸಲಿದೆ. ಏಕರೂಪ ನಾಗರಿಕ ಸಂಹಿತೆ, ಕಾಶಿ ವಿಶ್ವನಾಥ ದೇವಸ್ಥಾನದ ವಿಚಾರ, ಮಥುರಾದ ಕೃಷ್ಣ ಜನ್ಮಭೂಮಿ ವಿವಾದಗಳ ಬಗ್ಗೆ ರಾಜಕೀಯ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ‌. ಇದಲ್ಲದೆ ಪಕ್ಷದ ಕೆಲವು ನಾಯಕರು ಮತ್ತು ಅಂಗಸಂಸ್ಥೆಗಳು ಎತ್ತುತ್ತಿರುವ ಇನ್ನಿತರ ವಿಷಯಗಳ ಬಗ್ಗೆಯೂ ಸಮಾಲೋಚನೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ