ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ನಯಾ ಪೈಸೆ ಕೆಲಸ ಮಾಡದೇ, ನಯಾ ಪೈಸೆ ಅಭಿವೃದ್ಧಿ ಮಾಡದೇ, ಸಾಧನಾ ಸಮಾವೇಶ ಮಾಡಿದೆ. ಇದು ಸಾಧನಾ ಸಮಾವೇಶ ಅಲ್ಲ ಶೋಕಾಚಾರಣೆ ಸಮಾವೇಶ, ದಿವಾಳಿ ಮಾಡೆಲ್ ಆಫ್ ಕರ್ನಾಟಕ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರಕ್ಕೆ ದಿವಾಳಿ ಮಾಡೆಲ್ ಆಫ್ ಕರ್ನಾಟಕ ಎಂಬ ಹೊಸ ಬಿರುದನ್ನು ಕೊಟ್ಟು ವ್ಯಂಗ್ಯ ಮಾಡಿದ್ದಾರೆ. ಸರ್ಕಾರ ಪ್ರತಿ ದಿನ ಕೂಡ ಸಾಲ ತಗೊಂಡು ಸಂಬಳ ಕೊಡೋ ಪರಿಸ್ಥಿತಿ ಬಂದಿದೆ. ನಮ್ಮ ಡಿಕೆಶಿ ಅಣ್ಣ ಸರಿಯಾಗಿ ಹೇಳಿದ್ದಾರೆ. ತಿಂಗಳಿಗೆ ಕೊಡೋಕೆ ಆಗಲ್ಲ ಹಣವನ್ನು ಎಂದು ಹೇಳಿದ್ದರು. ಅದರ ಅರ್ಥ ಏನು ದುಡ್ಡಿಲ್ಲ ಅಂತ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಟೀಕಸಿದಿರು.
ತಿಂಗಳಿಗೊಮ್ಮೆ 2 ಸಾವಿರ ಫಟಾಫಟ್ ಹಣ ಕೊಡುವುದಾಗಿ ರಾಹುಲ್ ಗಾಂಧಿ ಹೇಳಿದ್ದರು. ಇಲ್ಲಿ ಶಿವಕುಮಾರ್ ಕಟಾಕಟ್, ಯಾವಾಗ ಹಣ ಬರುತ್ತೋ ಆಗ ದುಡ್ಡು ಕೊಡುವುದಾಗಿ ಹೇಳಿದ್ದಾರೆ ಎಂದು ಗಮನ ಸೆಳೆದರು.
ಮುಖ್ಯಮಂತ್ರಿಗಳೇ.. ಯಾವ ಸಾಧನೆಗಾಗಿ ಈ 2 ವರ್ಷದ ಸಂಭ್ರಮಾಚರಣೆ ಮಾಡಿದ್ದೀರಿ? ಏನು ಕಡಿದು ಕಟ್ಟೆ ಹಾಕಿದ್ದೀರಿ? ಎಂದು ಕೇಳಿದರು. ಹಾಲಿನ ದರ ಏರಿಸಿದ್ದೀರಿ. ನೀರು, ವಿದ್ಯುತ್, ಪೆಟ್ರೋಲ್, ಡೀಸೆಲ್, ಆಸ್ತಿ ತೆರಿಗೆ ಇವೆಲ್ಲವನ್ನೂ ಏರಿಸಿದ್ದೀರಿ. ದರ ಏರಿಸಿದ ಪರಿಣಾಮವಾಗಿ ಜನರು ಕಷ್ಟದಲ್ಲಿರುವಾಗ, ಸಮಾವೇಶ ಮಾಡಬೇಕೆಂದು ನಿಮಗೆ ಯಾಕೆ ಅನ್ನಿಸಿದೆ? ಎಂಬ ಪ್ರಶ್ನೆಯನ್ನು ಮುಂದಿಟ್ಟರು.
ಎರಡು ವರ್ಷಗಳಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ ₹187 ಕೋಟಿಯನ್ನು ಫಟಾಫಟ್ ಲೂಟಿ ಮಾಡಿದ್ದೀರಿ. ಇನ್ನೊಂದೆಡೆ ₹89 ಕೋಟಿ ಲೂಟಿ ಆಗಿರುವುದಾಗಿ ಸಿದ್ದರಾಮಯ್ಯನವರೇ ಅಧಿವೇಶನದಲ್ಲಿ ಹೇಳಿದ್ದಾರೆ. ಅದಕ್ಕಾಗಿ ಈ ಸಂಭ್ರಮವೇ? ಮುಡಾ ಹಗರಣದಲ್ಲಿ ವಾಸ್ತು ಪ್ರಕಾರ ಇರುವ 14 ಮೂಲೆ ನಿವೇಶನಗಳನ್ನು ಲೂಟಿ ಹೊಡೆದಿದ್ದಕ್ಕೆ ನಿಮ್ಮ ಈ ಸಂಭ್ರಮಾಚರಣೆಯೇ? ಎಂದು ಕಿಡಿಕಾಡಿದರು.