ಮಕ್ಕಳಲ್ಲಿ ವಿಷ ಬೀಜ ಬಿತ್ತುತ್ತಿರುವ ಬಿಜೆಪಿ: ಹರಿಪ್ರಸಾದ್‌ ಕಿಡಿ

ಮಂಗಳವಾರ, 17 ಮೇ 2022 (16:23 IST)

ಕೋಮುವಾದಿ ಹೆಗ್ಡೇವಾರ್‌ ಭಾಷಣವನ್ನು ಶಾಲಾ ಮಕ್ಕಳ ಪಾಠ್ಯದಲ್ಲಿ ಸೇರಿಸುವ ಮೂಲಕ ಬಿಜೆಪಿ ಮಕ್ಕಳಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಅಸಮಾಧಾನ ಹೊರಹಾಕಿದ್ದಾರೆ.

ದೆಹಲಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಣ್ಣ ಮಕ್ಕಳಿದ್ದಾಗಲೇ ವಿಷ ಬೀಜ ಬಿತ್ತುವ ಕೆಲಸವಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ತಂದಿರೋದೇ ಈ ಕಾರಣಕ್ಕೆ ಎಂದರು.

ಹೆಗ್ಡೇವಾರ್ ಕೋಮುವಾದ ಪ್ರತಿನಿಧಿಸುವ ಸಂಘಟನೆ ಮುಖ್ಯಸ್ಥರಾಗಿದ್ದರು. ಈ ರೀತಿಯವರು, ನಕ್ಸಲರು ಬಹಳಷ್ಟಿದ್ದಾರೆ. ಅವರನ್ನೇಲ್ಲಾ ಪಠ್ಯ ಪುಸ್ತಕದಲ್ಲಿ ಸೇರಿಸಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು.

ಸ್ವತಂತ್ರ ಹೋರಾಟದಲ್ಲಿ ತೊಡಗಿಸಿಕೊಂಡವರನ್ನು ಮಾತ್ರ ಪಠ್ಯದಲ್ಲಿ ಸೇರಿಸಲಾಗುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಸಂಪೂರ್ಣವಾಗಿ ಆರ್‌ ಎಸ್‌ ಎಸ್‌ ಅಜೆಂಡಾ ಅನುಷ್ಠಾನಗೊಳಿಸುತ್ತಿದ್ದಾರೆ. ಅದರಲ್ಲೂ ಬಸವಣ್ಣ, ಕುವೆಂಪು, ಕನಕದಾಸರ ನಾಡಲ್ಲಿ ಹೆಗ್ಡೇವಾರ್ ಪಠ್ಯ ಸೇರಿಸಿರುವುದು ವಿಷಾದನೀಯ ಎಂದು ಹರಿಪ್ರಸಾದ್‌ ಹೇಳಿದರು.

ಹೆಗ್ಡೇವಾರ್ ಭಾಷಣವನ್ನು ಪಠ್ಯದಲ್ಲಿ ಸೇರಿಸಿರುವುದು ಸರಿಯಲ್ಲ. ತಕ್ಷಣವೇ ಪಠ್ಯದಿಂದ ಹೆಗ್ಡೇವಾರ್ ಭಾಷಣವನ್ನು ತೆಗೆಯಬೇಕು. ಪಠ್ಯದಿಂದ ಭಗತ್ ಸಿಂಗ್ ಮಾತ್ರವಲ್ಲ, ಬಸವಣ್ಣ, ನಾರಾಯಣಗುರು ಪಠ್ಯಗಳನ್ನೂ ತೆಗೆದಿದ್ದಾರೆ. ಇವರೆಲ್ಲರನ್ನೂ ಮೀರಿದ ಕೊಡುಗೆ ಹೆಗ್ಡೇವಾರ್ ಕೊಟ್ಟಿದ್ದಾರಾ? ಎಂದು ಅವರು ಪ್ರಶ್ನಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ