ಬಿಡಿಎ ಅಧ್ಯಕ್ಷರ ಕಾರ್ಯದರ್ಶಿಗೆ 3 ಲಕ್ಷ ಸಂಬಳ ಬೇಕಾ? ಎಎಪಿ ಪ್ರಶ್ನೆ
ಮಂಗಳವಾರ, 17 ಮೇ 2022 (14:31 IST)
ನಿಯಮಗಳನ್ನು ಗಾಳಿಗೆ ತೂರಿ ಬಿಡಿಎ ಅಧ್ಯಕ್ಷರ ಆಪ್ತ ಸಹಾಯಕ ಹುದ್ದೆಗೆ ನೇಮಕಾತಿ ಮಾಡಿದ್ದಲ್ಲದೇ, ಮೂರು ಲಕ್ಷ ರೂಪಾಯಿಗೂ ಅಧಿಕ ವೇತನ ನೀಡುತ್ತಿರುವುದಕ್ಕೆ ಆಮ್ ಆದ್ಮಿ ಪಾರ್ಟಿ ಮುಖಂಡ ಹಾಗೂ ಮಾಜಿ ಕೆಎಎಸ್ ಅಧಿಕಾರಿ ಕೆ.ಮಥಾಯಿ ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಮಥಾಯಿ, “ಬಿಡಿಎ ಹಾಗೂ ಕರ್ನಾಟಕ ಸರ್ಕಾರದ ನಿಯಮಾವಳಿಯನ್ನು ಉಲಂಘಿಸಿ ಸೋಮಶೇಖರ್ ಎಂಬುವವರನ್ನು ಎಸ್.ಆರ್.ವಿಶ್ವನಾಥ್‌ರವರ ಆಪ್ತ ಸಹಾಯಕ ಹುದ್ದೆಗೆ ನೇಮಕ ಮಾಡಲಾಗಿದೆ. ಕೆಎಎಸ್ ಜೂನಿಯರ್ ಸ್ಕೇಲ್ ಹುದ್ದೆಗೆ ಕೆಎಎಸ್ ಅಲ್ಲದವರನ್ನು ನೇಮಿಸಲಾಗಿದೆ. ಈ ಹುದ್ದೆಗೆ ತಿಂಗಳಿಗೆ 50 ಸಾವಿರದಿಂದ 60 ಸಾವಿರ ರೂಪಾಯಿ ವೇತನವಿದ್ದರೂ ಬರೋಬ್ಬರಿ 3,12,002 ರೂಪಾಯಿ ಸಂಬಳವನ್ನು ಸೋಮಶೇಖರ್‌ರವರಿಗೆ ನೀಡಲಾಗುತ್ತಿದೆ. ಬಿಡಿಎ ಕಮಿಷನರ್ ಹಾಗೂ ಆಯುಕ್ತರಿಗೇ ಇಷ್ಟು ಸಂಬಳವಿಲ್ಲ” ಎಂದು ಹೇಳಿದರು.
ಬಿಜೆಪಿ ಶಾಸಕರೂ ಆಗಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಬಿಡಿಎ ಆಯುಕ್ತರು ಹಾಗೂ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನಿರ್ದೇಶನದಂತೆ ಸೋಮಶೇಖರ್ ನೇಮಕವಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್) ಕಾನೂನುಬಾಹಿರ ನೇಮಕಾತಿಗೆ ಅನುಮೋದನೆ ನೀಡಿದೆ. ಹಲವು ವರ್ಷಗಳಿಂದ ನಷ್ಟದಲ್ಲಿರುವ ಬಿಡಿಎಯು ಆಪ್ತ ಸಹಾಯಕ ಹುದ್ದೆಗೆ ದುಬಾರಿ ವೇತನ ನೀಡುತ್ತಿರುವುದರ ಹಿಂದಿನ ಉದ್ದೇಶವೇನು?” ಎಂದು ಕೆ.ಮಥಾಯಿ ಪ್ರಶ್ನಿಸಿದರು.
ಶೀಘ್ರವೇ ಸೋಮಶೇಖರ್‌ರವರನ್ನು ಅಮಾನತು ಮಾಡಿ, ಆ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ನೇಮಕ ಮಾಡಬೇಕು. ನಿಯಮಾವಳಿ ಅನ್ವಯ ವೇತನ ನೀಡಬೇಕು. ದುಬಾರಿ ವೇತನ ನೀಡಿದ್ದರಿಂದ ಈವರೆಗೆ ಬಿಡಿಎಗೆ ಆದ ನಷ್ಟವನ್ನು ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಸಂಬಳದಿಂದ ಭರಿಸಿಕೊಳ್ಳಬೇಕು. ಇಲ್ಲದಿದ್ದರೆ ವಿಧಾನಸೌಧದ ಎದುರು ಆಮ್ ಆದ್ಮಿ ಪಾರ್ಟಿಯು ಧರಣಿ ನಡೆಸಲಿದೆ ಎಂದು ಕೆ.ಮಥಾಯಿ ಎಚ್ಚರಿಕೆ ನೀಡಿದರು.