ಮೋದಿಯವರ ಋಣ ತೀರಿಸಲು ಬಿಜೆಪಿ ಬೆಂಬಲಿಸಿ- ಈಶ್ವರಪ್ಪ

ಸೋಮವಾರ, 22 ನವೆಂಬರ್ 2021 (21:04 IST)
ಬೆಂಗಳೂರು: ನರೇಂದ್ರ ಮೋದಿಯವರ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಅವರ ಋಣ ತೀರಿಸಲು ಬಿಜೆಪಿಗೆ ಮತ ಕೊಡಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪ ಅವರು ತಿಳಿಸಿದರು.
ಮಡಿಕೇರಿಯಲ್ಲಿ ಇಂದು ಜನಸ್ವರಾಜ್ ಯಾತ್ರೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿಯವರು ಅಮೃತ ಗ್ರಾಮ ಪಂಚಾಯಿತಿ ಯೋಜನೆ ಜಾರಿಗೊಳಿಸಿದ್ದಾರೆ. ಕೇಂದ್ರ- ರಾಜ್ಯ ಸರಕಾರಗಳು ಹಳ್ಳಿಗಳ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿವೆ ಎಂದು ವಿವರಿಸಿದರು.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿ ಟೀಕಿಸದೆ ಇದ್ದರೆ ತಿಂದ ಅನ್ನ ಕರಗುವುದಿಲ್ಲ. ಇಡೀ ಪ್ರಪಂಚ ನರೇಂದ್ರ ಮೋದಿಯವರಿಗೆ ಗೌರವ ಕೊಟ್ಟರೆ ಇವರು ಏಕವಚನ ಬಳಸುತ್ತಾರೆ. 70 ವರ್ಷದ ದೇಶದ ಆಳ್ವಿಕೆ ಮಾಡಿದ ಕಾಂಗ್ರೆಸ್ ಪಕ್ಷದವರು 20 ಕೋಟಿ ಮನೆಗಳ ಪೈಕಿ 3 ಕೋಟಿ ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡಿದರು. ಮೋದಿಯವರು 7 ವರ್ಷಕ್ಕೇ 8.5 ಕೋಟಿ ಮನೆಗಳಿಗೆ ನೀರು ಪೂರೈಸಿದ್ದಾರೆ ಎಂದು ತಿಳಿಸಿದರು.
2024ವರೆಗೆ ಪ್ರತಿಮನೆಗೆ ನಳ್ಳಿ ನೀರು ಕೊಡುವ ಗುರಿಯನ್ನು ಕೇಂದ್ರದ ಬಿಜೆಪಿ ಸರಕಾರ ಹಾಕಿಕೊಂಡಿದೆ. ಶೌಚಾಲಯ, ನೀರು, ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಸೌರವಿದ್ಯುತ್ ದೀಪ, ರಸ್ತೆಗಳ ಸೌಕರ್ಯಗಳನ್ನು ಕೊಡುತ್ತಿದೆ ಎಂದು ತಿಳಿಸಿದರು. ಪಂಚಾಯಿತಿ ಸದಸ್ಯರ ಗೌರವಧನ ಹೆಚ್ಚಳ, ಸೌಲಭ್ಯಗಳ ಹೆಚ್ಚಳದ ವಿಚಾರ ಸರಕಾರದ ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು.
ಕೋವಿಡ್ ಕುರಿತ ಆತಂಕ ಇದ್ದಾಗ ಲಸಿಕೆ ಸಂಶೋಧನೆಗೆ ಆದ್ಯತೆ ಕೊಟ್ಟರು. ಆದರೆ, ಲಸಿಕೆ ಹಾಕಿಕೊಂಡರೆ ಗಂಡಸ್ತನ ಹೋಗುತ್ತದೆ ಎಂದು ಕಾಂಗ್ರೆಸ್‍ನವರು ಹುಚ್ಚುಚ್ಚಾಗಿ ಮಾತನಾಡಿದರು. ಬಳಿಕ ಲಸಿಕೆ ಹಾಕಿಸಬೇಡಿ ಎಂದವರು ಸದ್ದಿಲ್ಲದೆ ಬಂದು ಲಸಿಕೆ ಹಾಕಿಸಿಕೊಂಡರು. ಪ್ರಪಂಚವೇ ಅಚ್ಚರಿ ಪಡುವ ಮಾದರಿಯಲ್ಲಿ 100 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ಕೊಟ್ಟಿರುವುದು ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ ಎಂದು ವಿವರಿಸಿದರು.
ಕೋವಿಡ್ ಟಾಸ್ಕ್ ಫೋರ್ಸ್‍ಗಳನ್ನು ಪಂಚಾಯಿತಿ ಮಟ್ಟದಲ್ಲಿ ರಚಿಸಿದಾಗ ಪಂಚಾಯಿತಿ ಸದಸ್ಯರು ಕ್ರಿಯಾಶೀಲವಾಗಿ ಕೆಲಸ ಮಾಡಿದ್ದಾರೆ. ಇದರಿಂದಾಗಿ ರಾಜ್ಯವು ಕೋವಿಡ್ ಮುಕ್ತವಾಗುವತ್ತ ನಡೆದಿದೆ. ಕೋವಿಡ್ ಬಂದಾಗ ಜನರು ಉದ್ಯೋಗ ಇಲ್ಲದೆ ಇರಬಾರದೆಂದು ಯೋಚಿಸಿದ ಪ್ರಧಾನಿಯವರು ನರೇಗಾದಡಿ 800 ಕೋಟಿಯಷ್ಟು ಹೆಚ್ಚು ಅನುದಾನ ನೀಡಿದ್ದಾರೆ. 100 ಮಾನವ ದಿನಗಳ ಬದಲಾಗಿ ಈಗ 150 ಮಾನವ ದಿನಗಳ ಕೆಲಸವನ್ನು ಕೊಡುತ್ತಿದ್ದಾರೆ ಎಂದು ತಿಳಿಸಿದರು.
ಕೋವಿಡ್ ಲಸಿಕೆಗಾಗಿ ವಿಶ್ವ ಮೋದಿ ಅವರನ್ನು ಹೊಗಳುತ್ತಿದೆ. ಉಚಿತ ಲಸಿಕೆ, ಉಚಿತ ರೇಷನ್ ಕೊಟ್ಟ ಪ್ರಧಾನಿ ಮೋದಿಯವರು. ವಿಶ್ವದ ನಂಬರ್ ವನ್ ಪ್ರಧಾನಿ ಎಂದು ಸಮೀಕ್ಷೆಗಳಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಪಂಚದಲ್ಲಿ ಕೋವಿಡ್ ನಿರ್ಮೂಲನ ಕಾರ್ಯದಲ್ಲಿ ಭಾರತ ಮೊದಲನೇ ಸ್ಥಾನ ಪಡೆದಿದೆ. ರಾಷ್ಟ್ರದಲ್ಲಿ ನಮ್ಮ ರಾಜ್ಯ ಪ್ರಥಮ ಸ್ಥಾನದಲ್ಲಿದೆ ಎಂದು ಮೆಚ್ಚುಗೆ ಸೂಚಿಸಿದರು.
ಜನಸ್ವರಾಜ್‍ನ ಒಟ್ಟು 4 ತಂಡಗಳಿದ್ದು, ನಮ್ಮ ತಂಡ ಐದು ದಿನಗಳ ಕಾಲ ಪ್ರವಾಸ ಮಾಡಿದೆ. ಐದು ದಿನಗಳ ಕಾಲ ಯಶಸ್ವಿಯಾಗಿ ಪ್ರವಾಸ ನಡೆದಿದೆ. ಹೆಣ್ಮಕ್ಕಳು ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇóಷ. ಇವತ್ತು ಭಕ್ತ ಕನಕದಾಸರ ಜಯಂತಿಯನ್ನು ಕೊಡಗಿನಲ್ಲೇ ಆಚರಿಸಲು ಅವಕಾಶ ಸಿಕ್ಕಿರುವುದು ಇನ್ನೊಂದು ವಿಶೇಷ ಎಂದು ತಿಳಿಸಿದರು. ಕುಲ ಕುಲವೆಂದು ಹೊಡೆದಾಡದಿರಿ ಎಂಬ ಕನಕದಾಸರ ಮಾತುಗಳನ್ನೇ ಬಿಜೆಪಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಪದಗಳ ಮೂಲಕ ಅಳವಡಿಸಿಕೊಂಡಿದೆ ಎಂದರು. ಹೆಣ್ಮಕ್ಕಳಿಗೆ ಆಡಳಿತ ಮಾಡುವ ಹೆಚ್ಚಿನ ಶಕ್ತಿ ಇದೆ ಎಂದು ಅವರು ನುಡಿದರು.
ಕೊಡಗು ಜಿಲ್ಲೆಯಲ್ಲಿ ಹಿಂದುತ್ವದ ಸಿಂಹಗಳಿರುವುದು ಇಡೀ ರಾಜ್ಯಕ್ಕೇ ಗೊತ್ತಿದೆ. ಇಲ್ಲಿ ಹಿಂದುತ್ವಕ್ಕೆ ತೊಂದರೆ ಕೊಟ್ಟವರು ತಾವು ತೊಂದರೆ ಅನುಭವಿಸುತ್ತಾರೆ ಎಂಬುದು ಜನರಿಗೂ ತಿಳಿದಿದೆ. ಬೇರೆಯವರಿಗೆ ನಾವು ತೊಂದರೆ ಕೊಡುವುದಿಲ್ಲ; ತೊಂದರೆ ಕೊಟ್ಟರೆ ಬಿಡುವುದಿಲ್ಲ ಎಂಬುದು ಕೊಡಗಿನವರ ವಿಶೇಷತೆ ಎಂದು ತಿಳಿಸಿದರು. ವ್ಯವಸ್ಥಿತವಾಗಿ ಬಿಜೆಪಿಯ ಸಂಘಟನೆ ಇಲ್ಲಿದೆ. ಎಂಎಲ್‍ಎ, ಎಂಪಿ, ನಗರಸಭೆ, ಪುರಸಭೆ, ಎಲ್ಲದರಲ್ಲೂ ಇಲ್ಲಿನ ಜನರು ರಾಷ್ಟ್ರೀಯ ವಿಚಾರಧಾರೆಗೆ ಮನ್ನಣೆ ಕೊಡುತ್ತಾರೆ ಎಂದು ತಿಳಿಸಿದರು.
ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ, ರಾಜ್ಯದ ಸಚಿವರಾದ ಸೋಮಶೇಖರ್, ಎಸ್. ಅಂಗಾರ, ಜಿಲ್ಲಾಧ್ಯಕ್ಷರಾದ ರಾಬಿನ್ ದೇವಯ್ಯ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಎಂ ಶಂಕರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಶ್ವಥ್‍ನಾರಾಯಣ, ರಾಜ್ಯ ಕಾರ್ಯದರ್ಶಿಗಳಾದ ವಿನಯ್ ಬಿದರೆ, ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ವಿಧಾನಪರಿಷತ್ ಚುನಾವಣೆ ಅಭ್ಯರ್ಥಿಗಳಾದ ಸುಜ ಕುಶಾಲಪ್ಪ,  ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ