ಗೃಹ ಸಚಿವರ ನಡೆ ಖಂಡಿಸಿ ಹಾಗೂ ಬಿಜೆಪಿ ಕಾರ್ಯಕರ್ತರ ಬಂಧನ ಖಂಡಿಸಿ ಬಿಜೆಪಿ ತನ್ನ ಪ್ರತಿಭಟನೆಯನ್ನು ತೀವ್ರಗೊಳಿಸಿದೆ.
ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪ್ರತಿಭಟನಾಕಾರರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಇಲ್ಲಿದ್ದಾರೆ. ಪ್ರತಿಭಟನಾನಿರತರನ್ನು ಕೆ ಎಸ್ ಆರ್ ಪಿ ಪೊಲೀಸರು ಸುತ್ತುವರಿದಿದ್ದಾರೆ.
ಮಾಜಿ ಎಂಎಲ್ ಸಿ ಅಶ್ವತ್ ನಾರಾಯಣ ಮಾತನಾಡಿ, ಈ ಹಿಂದೆ ತುರ್ತು ಪರಿಸ್ಥಿತಿ ಹೇರಿದ ಕಾರಣಕ್ಕೆ ಮಾಜಿ ಪ್ರಧಾನಿ ಇಂದಿರಾಗಾಂಧಿಗೆ ಏನಾಯ್ತು ಎಂದು ಗೊತ್ತಿದೆಯಲ್ವಾ? ಈಗ ಎಂ.ಬಿ.ಪಾಟೀಲರೂ ಹಾಗೇ ಗೃಹ ಇಲಾಖೆ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಐ ಎಸ್ ಐ ಎಸ್ ಉಗ್ರರು ಬೆಂಗಳೂರಿಗೆ ಬಂದಿರುವ ಮಾಹಿತಿ ಇದೆ. ಮೊದಲು ಅವರ ಬಗ್ಗೆ ಗಮನ ಕೊಡುವುದು ಬಿಟ್ಟು, ಬಿಜೆಪಿ ಕಾರ್ಯಕರ್ತರ ಕಡೆಗೆ ತಿರುಗಿದ್ದಾರೆ. ನೀವೂ ಏನು ಗೃಹ ಸಚಿವರಾಗಿ ಶಾಶ್ವತವಾಗಿ ಇರೋದಿಲ್ಲ.
ನೀವೂ ಮಾಜಿ ಆಗುತ್ತೀರಿ. ಆಗ ನಿಮ್ಮ ಪರಿಸ್ಥಿತಿ ಏನಾಗುತ್ತದೆ ಯೋಚಿಸಿ. ನಿಮ್ಮ ಧೋರಣೆ ಮುಂದುವರಿದರೆ ನಿಮ್ಮ ಮನೆಗೆ ಮುತ್ತಿಗೆ ಹಾಕಬೇಕಾಗುತ್ತದೆ. ನೀವು ಯಾವ ಕಾರ್ಯಕ್ರಮಕ್ಜೆ ಹೋದರೂ ನಾವು ಕಪ್ಪುಬಾವುಟ ಪ್ರದರ್ಶಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.