ಎಚ್‌ಡಿಕೆ ಆಪ್ತ ಕೆ.ರಾಜು ಅವರ ಜೊತೆ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ರುದ್ರೇಶ್ ಅವರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ಕೆ.ರಾಜು ಅವರು ತಮ್ಮ ಆಪ್ತ ಸ್ನೇಹಿತರಾಗಿರುವ ಜೆಡಿಎಸ್ ಬಂಡಾಯ ಶಾಸಕ ಬಾಲಕೃಷ್ಣ ಅವರ ನಿರ್ಧಾರದಂತೆ ನಡೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೆ.ರಾಜು ನಡುವೆ ಮುನಿಸು ಉಂಟಾಗಿದ್ದು, ಈ ಸಮಯವನ್ನು ಬಿಜೆಪಿ ಬಳಸಿಕೊಂಡು ಜೆಡಿಎಸ್ ಭದ್ರಕೋಟೆಯಾಗಿರುವ ರಾಮನಗರವನ್ನು ತಮ್ಮ ವಶಕ್ಕೆ ಪಡೆಯಲು ಮಾಸ್ಟರ್ ಪ್ಲ್ಯಾನ್ ರೂಪಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಕುಮಾರಸ್ವಾಮಿ ಅವರ ಆಪ್ತನಾಗಿದ್ದ ಕೆ.ರಾಜು ಬಿಜೆಪಿ ಪಕ್ಷ ಸೇರಿದರೆ ಜೆಡಿಎಸ್ ಭದ್ರಕೋಟೆಯಾಗಿರುವ ರಾಮನಗರ ವಿಧಾನಸಭೆ ಕ್ಷೇತ್ರ ಸುಲಭವಾಗಿ ಬಿಜೆಪಿ ವಶಕ್ಕೆ ಬರುತ್ತದೆ ಎಂದು ಲೆಕ್ಕಾಚಾರ ಹಾಕಿರುವ ಬಿಜೆಪಿ ನಾಯಕರು, ಕೆ.ರಾಜು ಅವರನ್ನು ಸೆಳೆಯಲು ತೆರೆಮರೆಯ ಕಸರತ್ತಿನಲ್ಲಿ ತೊಡಗಿದೆ.