ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಆರ್ ಎಸ್ಎಸ್ ಸಂಘದ ಗೀತೆ ಹಾಡಿದ್ದರೆ ಅದಕ್ಕೆ ಡಿಕೆ ಶಿವಕುಮಾರ್ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಎಂಎಲ್ ಸಿ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ಆರ್ ಎಸ್ಎಸ್ ವಿರುದ್ಧ ಸದಾ ಕಿಡಿ ಕಾರುವ ಬಿಕೆ ಹರಿಪ್ರಸಾದ್ ಈಗ ಡಿಕೆ ಶಿವಕುಮಾರ್ ಅಸೆಂಬ್ಲಿಯಲ್ಲಿ ಸಂಘದ ಗೀತೆ ಹಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಡಿಸಿಎಂ ಆಗಿ ಸಂಘದ ಗೀತೆ ಹಾಡುವುದಕ್ಕೆ ಅಭ್ಯಂತರವಿಲ್ಲ. ಆದರೆ ಅವರೇ ಕೆಪಿಸಿಸಿ ಅಧ್ಯಕ್ಷರೂ ಆಗಿರುವುದರಿಂದ ಇದು ತಪ್ಪು. ಇದಕ್ಕೆ ಅವರು ಕ್ಷಮೆ ಕೇಳಬೇಕು ಎಂದಿದ್ದಾರೆ.
ಡಿಕೆ ಶಿವಕುಮಾರ್ ಸಂಘದ ಗೀತೆ ಹಾಡಿದ್ದು ಈಗ ಕಾಂಗ್ರೆಸ್ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಡಿಸಿಎಂ ಆಗಿ ಹೇಳಿದ್ರೆ ಅಭ್ಯಂತರವಿಲ್ಲ. ಅದು ಸರ್ಕಾರೀ ಹುದ್ದೆ. ಅದರಲ್ಲಿ ಒಳ್ಳೆಯವರು, ಎಲ್ಲವರೂ ಇರುತ್ತಾರೆ. ಆರ್ ಎಸ್ಎಸ್, ತಾಲಿಬಾನಿಗಳು ಇರುತ್ತಾರೆ. ಆದರೆ ಕೆಪಿಸಿಸಿ ಅಧ್ಯಕ್ಷರಾಗಿ ಹೇಳಿದ್ದು ತಪ್ಪು ಎಂದಿದ್ದಾರೆ.
ಮೊನ್ನೆಯಷ್ಟೇ ಆರ್ ಎಸ್ಎಸ್ ಎಂದರೆ ಭಾರತದ ತಾಲಿಬಾನ್ ಇದ್ದಂತೆ ಎಂದು ಬಿಕೆ ಹರಿಪ್ರಸಾದ್ ಕಿಡಿ ಕಾರಿದ್ದರು. ಇದೀಗ ಡಿಕೆಶಿ ಅದೇ ಸಂಘದ ಗೀತೆ ಹಾಡಿದ್ದಕ್ಕೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.