ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಮಾಸ್ಕ್ ಮ್ಯಾನ್ ಬಂಧನವಾಗುತ್ತಿದ್ದಂತೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಷಡ್ಯಂತ್ರ ನನಗೆ ಮೊದಲೇ ಗೊತ್ತಿತ್ತು ಎಂದಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಗುಂಡಿಗಳನ್ನು ಅಗೆಸಿದ್ದ ಮಾಸ್ಕ್ ಮ್ಯಾನ್ ಮೇಲೆಯೇ ಅನುಮಾನ ಶುರುವಾಗಿತ್ತು. ಇದರ ಬೆನ್ನಲ್ಲೇ ಎಸ್ಐಟಿ ಆತನನ್ನು ವಿಚಾರಣೆಗೊಳಪಡಿಸಿತ್ತು. ಈ ವೇಳೆ ಆತ ನನ್ನನ್ನು ಈ ರೀತಿ ಹೇಳು ಎಂದು ಒಂದು ಗುಂಪು ಹೇಳಿತ್ತು ಎಂದು ಸತ್ಯ ಬಾಯ್ಬಿಟ್ಟಿದ್ದ.
ಈ ಹಿನ್ನಲೆಯಲ್ಲಿ ಸತತ ಒಂದು ದಿನ ಆತನ ವಿಚಾರಣೆ ನಡಸಿದ ಎಸ್ಐಟಿ ಈಗ ಸುಳ್ಳು ಹೇಳಿಕೆ ನೀಡಿದ್ದಕ್ಕೆ ಆತನನ್ನೇ ಬಂಧಿಸಿದೆ. ಈ ಬಗ್ಗೆ ಇಂದು ಮಾಧ್ಯಮಗಳು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿವೆ.
ಇದಕ್ಕೆ ಉತ್ತರಿಸಿರುವ ಅವರು ನೋಡ್ರಿ.. ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರವಿದೆ ಎಂದು ನನಗೆ ಮೊದಲೇ ಗೊತ್ತಿತ್ತು. ಹೀಗಾಗಿ ನಾನೇ ಅದನ್ನು ಮೊದಲು ಹೇಳಿದ್ದೆ. ನಾನು ಹೇಳಿದ ಮೇಲೆ ಬಿಜೆಪಿಯವರು ಹೋರಾಟ ಶುರು ಮಾಡಿದ್ರು. ಬಿಜೆಪಿಯವರು ಒಂದು ರೀತಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಆಡಿದರು. ರಾಜಕೀಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಎಂದಿದ್ದಾರೆ.