ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್‌ ಮೆಟ್ಟಿಲೇರಿದ ಬೊಮ್ಮಾಯಿ

Sampriya

ಬುಧವಾರ, 28 ಆಗಸ್ಟ್ 2024 (14:07 IST)
ಬೆಂಗಳೂರು: ತಮ್ಮ ವಿರುದ್ಧದ ಯಾವುದೇ ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ಪ್ರತಿಬಂಧಕಾದೇಶ ಕೋರಿ ಮಾಜಿ ಮುಖ್ಯಮಂತ್ರಿ, ಹಾವೇರಿ ಕ್ಷೇತ್ರದ ಸಂಸದ  ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಪ್ರತಿಬಂಧಕಾದೇಶ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ಬೆಂಗಳೂರಿನ ಸತ್ರ ನ್ಯಾಯಾಲಯವು ಆದೇಶ ಕಾಯ್ದಿರಿಸಿದೆ. ಬೊಮ್ಮಾಯಿ ಸಲ್ಲಿಸಿರುವ ಮೂಲ ದಾವೆಯ ಭಾಗವಾಗಿ ಮಧ್ಯಂತರ ಅರ್ಜಿಯ ವಿಚಾರಣೆಯನ್ನು 8ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ವಾಣಿ ಎ. ಶೆಟ್ಟಿ ನಡೆಸಿದರು.

ವಕೀಲ ಕೆ.ಎನ್. ಜಗದೀಶ್ ಮತ್ತು ಮಾಧ್ಯಮಗಳು ತಮ್ಮ ವಿರುದ್ಧದ ಆಕ್ಷೇಪಾರ್ಹ ಹೇಳಿಕೆ ಮತ್ತು ಸುದ್ದಿಗಳನ್ನು ಪ್ರಕಟಿಸದಂತೆ ಪ್ರತಿಬಂಧಕಾದೇಶ ನೀಡಲು ಅವರು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಮಂಗಳವಾರ ಅರ್ಜಿಯ ವಿಚಾರಣೆ ನಡೆಸಲಾಗಿದ್ದು, ಬುಧವಾರ ಆದೇಶ ನೀಡುವ ಸಾಧ್ಯತೆ ಇದೆ. ಸಂಸದ ಬಸವರಾಜ ಬೊಮ್ಮಾಯಿ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು ವಾದ ಮಾಡಿದ್ದಾರೆ. ಅವರು ನ್ಯಾಯಾಲಯಕ್ಕೆ ಸಂಬಂಧಿತ ದಾಖಲೆಗಳ ಮೆಮೊವನ್ನು ಸಲ್ಲಿಸಿದ್ದು, ಇಂದು ಆದೇಶ ಕೊಡುವುದಾಗಿ ನ್ಯಾಯಾಲಯ ಹೇಳಿದೆ.

ವಕೀಲ ಜಗದೀಶ್ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ. ಬಸವರಾಜ ಬೊಮ್ಮಾಯಿ ಆಪ್ತ ಸಹಾಯಕ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಅವರ ಬೆನ್ನಲ್ಲೇ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಇದೆಲ್ಲದರ ಮಧ್ಯ ಬಸವರಾಜ ಬೊಮ್ಮಾಯಿ ಕೋರ್ಟ್​ ಮೊರೆ ಹೋಗಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಬೊಮ್ಮಾಯಿ ವಿರುದ್ಧ ಏನಾದರೂ ಆರೋಪಗಳು ಇದ್ದಾವೆಯೇ? ಯಾರಾದರೂ ಅವುಗಳನ್ನು ಬಹಿರಂಗಪಡಿಸಲು ಮುಂದಾಗಿದ್ದಾರಾ? ಹೀಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ