ಮುಡಾ ಹಗರಣವನ್ನಿಟ್ಟುಕೊಂಡು ಕೇಂದ್ರ ನಾಯಕರಾದ ಅಮಿತ್ ಶಾ, ಮೋದಿ ರಾಜ್ಯದಲ್ಲಿ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಮುಂದೆ ಬಾಂಗ್ಲಾದೇಶ ಪ್ರಧಾನಿ ನಿವಾಸಕ್ಕೆ ಜನ ನುಗ್ಗಿದಂತೆ ಮೋದಿ ನಿವಾಸಕ್ಕೂ ಜನ ನುಗ್ಗುವ ಕಾಲ ದೂರವಿಲ್ಲ ಎಂದು ರೋಣ ಕಾಂಗ್ರೆಸ್ ಶಾಸಕ ಜಿಎಸ್ ಪಾಟೀಲ್ ಹೇಳಿದ್ದಾರೆ.
ಅವರ ಈ ಹೇಳಿಕೆ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಮೊದಲು ಕಾಂಗ್ರೆಸ್ ನಾಯಕ ಐವಾನ್ ಡಿಸೋಜ ಕೂಡಾ ಇಂತಹದ್ದೇ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದ್ದರು. ಇದೀಗ ಜಿಎಸ್ ಪಾಟೀಲ್ ಕೂಡಾ ಇದೇ ಮಾತುಗಳನ್ನು ಹೇಳಿದ್ದು, ಬಿಜೆಪಿಗೆ ಕಾಂಗ್ರೆಸ್ ವಿರುದ್ಧ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.
ಗಜೇಂದ್ರಗಡದಲ್ಲಿ ಅಹಿಂದ ಸಮಾವೇಶದಲ್ಲಿ ಮಾತನಾಡಿದ ಜಿಎಸ್ ಪಾಟೀಲ್, ನಾವೆಲ್ಲಾ ಒಂದಾಗಬೇಕು, ಒಗ್ಗಟ್ಟಾಗಿ ಹೋರಾಡಬೇಕು. ಸಿದ್ದರಾಮಯ್ಯಗೆ ಈ ಸ್ಥಿತಿ ಬರಲು ಅಮಿತ್ ಶಾ ಅವರೇ ಕಾರಣ. ಅವರು ರಾಜಕೀಯ ಜೀವನದ್ದುದ್ದಕ್ಕು ಇಂತಹದ್ದನ್ನೇ ಮಾಡಿಕೊಂಡು ಬಂದವರು. ಹೀಗೇ ಮುಂದುವರಿದರೆ ಬಾಂಗ್ಲಾದೇಶದಲ್ಲಿ ಆದಂತೆ ಇಲ್ಲೂ ಪ್ರಧಾನಿ ಮನೆಗೆ ಜನ ನುಗ್ಗುವ ಕಾಲ ದೂರವಿಲ್ಲ ಎಂದಿದ್ದಾರೆ.