ಮೃತ ಕಿರಣ್ ಹುಬ್ಬಳ್ಳಿಯ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು ಕೊಪ್ಪಳ ಜಿಲ್ಲೆ, ಗಂಗಾವತಿ ತಾಲ್ಲೂಕಿನ ಜೀರಾಳ ಕಲ್ಗುಡಿ ಗ್ರಾಮದ ನಿವಾಸಿಯಾಗಿದ್ದಾನೆ. ತನ್ನ ಸಂಬಂಧಿ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ ಕಿರಣ್, ತಮ್ಮಿಬ್ಬರ ಮದುವೆಗೆ ಯುವತಿ ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆಂದು ಕೊಪ್ಪಳದ ಮುನಿರಾಬಾದ್ನಲ್ಲಿರುವ ಯುವತಿಯ ಮನೆ ಮುಂದೆ ಅಕ್ಟೋಬರ್ 10 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದ. ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಕೊನೆಯುಸಿರೆಳೆದಿದ್ದಾನೆ.
ವಿಡಿಯೋದಲ್ಲಿ ಆತ ಹೇಳಿದ್ದೇನು: ನಾನು ಸಾಯುತ್ತಿದ್ದೇನೆ. ಅದಕ್ಕೆ ಕಾರಣ ಪ್ರೇಮ. ನಾನು ಅನನ್ಯ(ಹೆಸರು ಬದಲಿಸಲಾಗಿದೆ)ಳನ್ನು ಕಳೆದ 2-3 ವರ್ಷದಿಂದ ಪ್ರೀತಿಸುತ್ತಿದ್ದು ನಾವಿಬ್ಬರು ಲಿವಿಂಗ್ ಟುಗೆದರ್ ಸಂಬಧವನ್ನಿಟ್ಟುಕೊಂಡಿದ್ದೆವು. ನಾನು ಉತ್ತಮ ಕೆಲಸದಲ್ಲಿದ್ದು, ಆಕೆ ಸಹ ಇತ್ತೀಚಿಗೆ ಎಂಜಿನಿಯರಿಂಗ್ ಮುಗಿಸಿದ್ದಳು. ಇಷ್ಟು ವರ್ಷ ನಮ್ಮಿಬ್ಬರ ನಡುವೆ ಎಲ್ಲವೂ ಸರಿಯಾಗಿತ್ತು. ಆದರೆ ಕಳೆದ ಮೂರ್ನಾಲ್ಕು ತಿಂಗಳಿಂದ ಅನನ್ಯ ನನ್ನ ಜತೆ ಫೋನ್ ಸಂಪರ್ಕವನ್ನು ಸಹ ಕಡಿದುಕೊಂಡಿದ್ದಳು. ನಾನು ಉತ್ತಮ ಕೆಲಸದಲ್ಲಿಲ್ಲ ಎಂದು ಆರೋಪಿಸುತ್ತಿದ್ದ ಆಕೆಯ ಪೋಷಕರು ಮದುವೆಗೆ ವಿರೋದ ವ್ಯಕ್ತಪಡಿಸಿದ್ದರಲ್ಲದೇ ಆಕೆಗೆ ಬೇರೊಬ್ಬನ ಜತೆ ಮದುವೆ ಮಾಡಿಸುವ ಪ್ರಯತ್ನದಲ್ಲಿದ್ದರು. ಇದರಿಂದ ನೊಂದಿರುವ ನಾನು ಸಾವಿಗೆ ಶರಣಾಗುತ್ತಿದ್ದೇನೆ. ನನಗೆ ಅವಳನ್ನು ಬಿಟ್ಟಿರಲು ಆಗುತ್ತಿಲ್ಲ. ನನ್ನ ಸಾವಿಗೆ ಅನನ್ಯ ಮತ್ತು ಆಕೆಯ ತಾಯಿ ಕಾರಣರು, ಅಪ್ಪ ಅಮ್ಮ ನನ್ನನ್ನು ಕ್ಷಮಿಸಿ. ಅವಳಿಲ್ಲದ ಬದುಕು ನನಗೆ ಬೇಡ.