ಪಟಾಕಿ ಹಚ್ಚಿದ್ದು ಸಾಕು ಎಂದಿದ್ದಕ್ಕೆ ಆತ್ಮಹತ್ಯೆ

ಗುರುವಾರ, 3 ನವೆಂಬರ್ 2016 (10:47 IST)
ಇಂದಿನ ದಿನಗಳಲ್ಲಿ ಸಾವು ಎಂದರೇನು ಎಂದು ತಿಳಿಯದ ಮಕ್ಕಳು ಕೂಡ ಜೀವನಕ್ಕೆ ಅಂತ್ಯ ಹಾಡಿಕೊಳ್ಳುತ್ತಿದ್ದಾರೆ. ಕಾರಣವೇ ಅಲ್ಲದ ಕಾರಣಕ್ಕೆ ಆತ್ಮಹತ್ಯೆಯಂತಹ ಘೋರ ನಿರ್ಧಾರಕ್ಕೆ ಬರುತ್ತಿದ್ದಾರೆ. ಇಂತಹದೇ ಒಂದು ಘಟನೆ ಮೈಸೂರಿನಲ್ಲಿ ನಡೆದಿದೆ.

ಪಟಾಕಿ ಹಚ್ಚಿದ್ದು ಸಾಕು ಎಂದು ಹೇಳಿದ್ದಕ್ಕೆ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ವಿವಿ ಪುರಂನಲ್ಲಿ ನಡೆದಿದೆ.
 
ಶ್ರೀರಾಂಪುರದ ಮದರ್ ತೆರೇಸಾ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಗೌರವ್ ಮೃತ ಬಾಲಕ. 
 
ಮಂಗಳವಾರ ಸಂಜೆ ಬಾಲಕ ತಂದೆ ರಾಜೇಶ ಬಳಿ ಗೆಳೆಯರೊಂದಿಗೆ ಪಟಾಕಿ ಹಚ್ಚಲು ಹೋಗುತ್ತೇನೆ ಎಂದಿದ್ದಾನೆ. ಅದಕ್ಕೆ ತಂದೆ ಮೂರು ದಿನಗಳಿಂದ ಪಟಾಕಿ ಹಚ್ಚಿದ್ದು ಸಾಕು, ಇನ್ನು ಮನೆಯಲ್ಲಿದ್ದು ಗಂಭೀರವಾಗಿ ಓದಿಕೋ ಎಂದಿದ್ದಾರೆ. 
 
ಇದರಿಂದ ಬೇಸರಗೊಂಡ ಗೌರವ್ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ. ಕೋಪಗೊಂಡಾಗಲೆಲ್ಲ ಮಗ ಹೀಗೆ ಮಾಡುತ್ತಾನೆ ಎಂದು ತಂದೆ ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. 
 
ಬಹಳ ಹೊತ್ತಾದರೂ ಮಗ ಬಾಗಿಲು ತೆರೆಯದಿದ್ದಾಗ ಗಾಬರಿಗೊಂಡ ತಾಯಿ ಪತಿಯನ್ನು ಕರೆದು ಬಾಗಿಲು ಒಡೆಸಿದಾಗ ಮಗ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅದಾಗಲೇ ಆತ ಮೃತ ಪಟ್ಟಿದ್ದ.
 
ಮಗನನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನವೀಗ ಮುಗಿಲು ಮುಟ್ಟಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ