ನಕಲಿ ವೈದ್ಯನ ಚಿಕಿತ್ಸೆಯಿಂದ ಕೈ ಕಳೆದುಕೊಂಡ ಬಾಲಕ

ಸೋಮವಾರ, 4 ಜೂನ್ 2018 (19:53 IST)
ನಕಲಿ ವೈದ್ಯನ ಚಿಕಿತ್ಸೆಯಿಂದ ಕೈ ಕಳೆದುಕೊಂಡ ಬಾಲಕ ಈಗ ನರಳಾಡುತ್ತಿದ್ದಾನೆ. ನಾಟಿ ವೈದ್ಯಕೀಯ ಪದ್ದತಿಗೆ ಬಾಲಕನ ಕೈ ಬಲಿಯಾಗಿದೆ. 
ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮದ ಪರಮಣ್ಣ ಬನಗುಂಡಿ ಎಂಬ ನಾಟಿ ವೈದ್ಯನ ಯಡವಟ್ಟು ಚಿಕಿತ್ಸೆಯಿಂದ ಬಾಲಕ ಕೈ ಕಳೆದುಕೊಳ್ಳುವಂತಾಗಿದೆ. 
 
ಕಳೆದ ಏಪ್ರಿಲ್ ತಿಂಗಳಲ್ಲಿ ಲಿಂಗಸೂಗೂರಿನ ಮನೆಯಂಗಳದಲ್ಲಿ 10 ವರ್ಷದ ಆದರ್ಶ ಎಂಬ ಮಗು ಆಟವಾಡುತ್ತಾ ಎಡಗೈ ಮುರಿದುಕೊಂಡಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸಿ ನಂತರ ಬೇಗ ಗುಣಮುಖವಾಗಲಿದೆ ಎಂಬ ಮಾಹಿತಿ ಮೇರೆಗೆ ಪರಮಣ್ಣನ ಬಳಿ ಚಿಕಿತ್ಸೆ ಕೊಡಿಸಲು ಪೋಷಕರು ಮುಂದಾಗಿದ್ರು. 
 
ಸರ್ಕಾರಿ ವೈದ್ಯರು ಹಾಕಿದ್ದ ಪ್ಲಾಸ್ಟರ್ ತೆಗೆದು ನಾಟಿ ಔಷಧ ಲೇಪಿಸಿ ತಾನೊಂದು ಪಟ್ಟಿಯನ್ನು ಪರಮಣ್ಣ ಹಾಕಿದ್ದ. ಮರುದಿನವೇ ಅಡ್ಡ ಪರಿಣಾಮ ಉಂಟಾಗಿ ನೋವು ಕಾಣಿಸಿಕೊಂಡರೂ 21 ದಿನಗಳವರೆಗೆ  ತಾನು ಹಾಕಿದ್ದ ಪಟ್ಟಿ ತೆಗೆಯದಂತೆ ಹೇಳಿದ್ದನು. ಕೈ ಬಾವು ಮತ್ತಷ್ಟು ಹೆಚ್ಚಾದಾಗ ಪೋಷಕರು ಮತ್ತೊಬ್ಬ ವೈದ್ಯನ ಬಳಿ ಹೋಗಿದ್ದಾರೆ. ಬಾಲಕನ ಕೈ ನರಗಳು ಸತ್ತು ಹೋಗಿವೆ ಅಂತಾ ವೈದ್ಯರು ತಿಳಿಸಿದ್ದಾರೆ. 
 
ಪೋಷಕರು ಕೂಡಲೇ ಮಹರಾಷ್ಟ್ರದ ಮೀರಜ್ ಗೆ ತೆರಳಿ ಚಿಕಿತ್ಸೆಕೊಡಿಸಲು ಮುಂದಾದ್ರೂ, ಕೈ ಕತ್ತರಿಸಬೇಕೆಂದು ವೈದ್ಯರು ಸಲಹೆ ನೀಡಿ ಕತ್ತರಿಸಿದ್ದಾರೆ. ನಾಟಿ ವೈದ್ಯನ ಅವೈಜ್ಞಾನಿಕ ಚಿಕಿತ್ಸಾ ಪದ್ಧತಿಗೆ ಬಾಲಕನೋರ್ವನ ಕೈ  ಕತ್ತರಿಸಬೇಕಾಯ್ತು. 
 
ನಾಟಿ ವೈದ್ಯನ ವಿರುದ್ಧ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅವೈಜ್ಞಾನಿಕ ಪದ್ಧತಿಗಳ ಬಗ್ಗೆ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಕ್ರಮವಹಿಸಬೇಕಿದೆ, ತಮಗೆ ನ್ಯಾಯ ಒದಗಿಸಿ ಎಂಬುದು ಪೋಷಕರು ಒತ್ತಾಯ ಮಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ