ಬೆಂಗಳೂರು: ಕರ್ನಾಟಕ ಸರ್ಕಾರ ಬಿಪಿಎಲ್ ಕಾರ್ಡ್ ಗಳ ಪರಿಷ್ಕರಣೆ ನಡೆಸುತ್ತಿದ್ದು, ಸರ್ಕಾರೀ ನೌಕರರು, ತೆರಿಗೆದಾರರ ಬಳಿ ಬಿಪಿಎಲ್ ಇದ್ದರೆ ಅದನ್ನು ಎಪಿಎಲ್ ಗೆ ವರ್ಗಾಯಿಸುವ ಕೆಲಸ ಮಾಡುತ್ತಿದೆ. ಈ ನಡುವೆ ಬಿಪಿಎಲ್ ಕಾರ್ಡ್ ಹೊಂದಿರುವ ಸರ್ಕಾರೀ ನೌಕರರಿಗೆ ಬಿಗ್ ಶಾಕ್ ಸಿಕ್ಕಿದೆ.
ಇತ್ತೀಚೆಗೆ ಬಿಪಿಎಲ್ ಕಾರ್ಡ್ ರದ್ದಾಗಿರುವುದರ ಬಗ್ಗೆ ಸರ್ಕಾರದ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಇದಾದ ಬಳಿಕ ಎಚ್ಚೆತ್ತುಕೊಂಡ ಸರ್ಕಾರ ರದ್ದಾಗಿರುವ ಬಿಪಿಎಲ್ ಕಾರ್ಡ್ ದಾರರ ಪೈಕಿ ನಿಜವಾಗಿಯೂ ಅರ್ಹರು ಯಾರು ಎಂದು ಗುರುತಿಸಿ ಅವರಿಗೆ ಮರಳಿ ಬಿಪಿಎಲ್ ಕಾರ್ಡ್ ಕೊಡುವ ಕೆಲಸ ಮಾಡುತ್ತಿದೆ.
ಆದರೆ ಸರ್ಕಾರದ ಮಾನದಂಡದ ಪ್ರಕಾರ ಸರ್ಕಾರೀ ನೌಕರರು, ತೆರಿಗೆ ಪಾವತಿ ಮಾಡುವವರಿಗೆ ಬಿಪಿಎಲ್ ಕಾರ್ಡ್ ರದ್ದಾಗಿದೆ. ಇದೀಗ ಸರ್ಕಾರೀ ನೌಕರಿಯಲ್ಲಿದ್ದುಕೊಂಡೂ ಬಿಪಿಎಲ್ ಕಾರ್ಡ್ ಪಡೆದಿದ್ದವರಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. ಬಿಪಿಎಲ್ ಕಾರ್ಡ್ ಹೊಂದಿದ್ದ ನೌಕರರ ರೇಷನ್ ಕಾರ್ಡ್ ನ್ನು ಎಪಿಎಲ್ ಗೆ ವರ್ಗಾಯಿಸಿರುವುದಲ್ಲದೆ ದಂಡದ ಬರೆ ನೀಡಿದೆ.
ಈ ರೀತಿ ಇದುವರೆಗೆ ಶಿವಮೊಗ್ಗ ಜಿಲ್ಲೆಯೊಂದರಲ್ಲೇ 4,12, 890 ರೂ. ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ. ಸುಮಾರು 72 ಸರ್ಕಾರಿ ನೌಕರರಿಗೆ ದಂಡ ವಿಧಿಸಲಾಗಿದೆ. ಬಿಪಿಎಲ್ ಕಾರ್ಡ್ ಅರ್ಹ ಬಡವರಿಗೆ ಮಾತ್ರ ಲಭಿಸುವಂತಾಗಬೇಕು. ಬಿಪಿಎಲ್ ಕಾರ್ಡ್ ಮೂಲಕ ಅನರ್ಹರೂ ಉಚಿತ ಯೋಜನೆಗಳ ಲಾಭ ಪಡೆಯುತ್ತಿದ್ದರೆ ಅದು ಸರ್ಕಾರದ ಬೊಕ್ಕಸಕ್ಕೆ ಹೊರೆ. ಇದರ ಬದಲು ಆ ಯೋಜನೆಗಳು ಬಡವರಿಗೆ ಸಿಕ್ಕಿದರೆ ನಿಜವಾಗಿಯೂ ಬಿಪಿಎಲ್ ಕಾರ್ಡ್ ಗೆ ಅರ್ಥ ಬಂದಂತಾಗುತ್ತದೆ.